ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪದಚ್ಯುತಿ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಸಂಸತ್ತಿನಲ್ಲಿ ಹೊಸದಾಗಿ ನೋಟಿಸ್ ಸಲ್ಲಿಸಲು ವಿರೋಧ ಪಕ್ಷಗಳು ಚಿಂತಿಸಿವೆ.
ಈ ಹಿಂದಿನ ನೋಟಿಸ್ ತಿರಸ್ಕೃತಗೊಂಡಿದ್ದರಿಂದ, ವಿರೋಧ ಪಕ್ಷಗಳ ಹಲವು ಮುಖಂಡರು ಈ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ಶನಿವಾರ ತಿಳಿಸಿವೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳ ಕನಿಷ್ಠ ಐವರು ಸಂಸದರು ಸಿಇಸಿ ಪದಚ್ಯುತಿ ಪ್ರಕ್ರಿಯೆ ಆರಂಭಿಸಲು ಹೊಸದಾಗಿ ನೋಟಿಸ್ ನೀಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪದಚ್ಯುತಿ ನೋಟಿಸ್ ಅನ್ನು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಒಂದು ಸದನದಲ್ಲಿ ಸಲ್ಲಿಸಬೇಕೋ, ಇಲ್ಲವೇ ಈ ಹಿಂದಿನ ಬಾರಿಯಂತೆ ಎರಡೂ ಸದನಗಳಲ್ಲಿ ಸಲ್ಲಿಸಬೇಕೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂಬುದು ಗೊತ್ತಾಗಿದೆ.
ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದ ಸಂವಿಧಾನ (131ನೇ ತಿದ್ದುಪಡಿ) ಮಸೂದೆಗೆ ಸೋಲುಂಟಾಗಿದ್ದು, ಇದರಿಂದ ಉತ್ತೇಜಿತರಾದ ವಿರೋಧ ಪಕ್ಷಗಳ ಮುಖಂಡರು ಸಿಇಸಿ ವಜಾ ಪ್ರಕ್ರಿಯೆ ಆರಂಭಿಸುವಂತೆ ಕೋರುವ ನೋಟಿಸ್‌ಗೆ ಹೆಚ್ಚಿನ ಸಂಸದರ ಸಹಿ ಪಡೆಯುವ ಉಮೇದಿನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

