ಪುರುಲಿಯಾ: 'ನುಸುಳುಕೋರರಿಗೆ ನೆಲೆ ಕಲ್ಪಿಸುವ ಮೂಲಕ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳದ ಭಾಷೆ ಮತ್ತು ಸಂಸ್ಕೃತಿಯನ್ನು ಬದಲಾಯಿಸುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಇಲ್ಲಿಗೆ ಸಮೀಪದ ಜಂಗಲ್‌ಮಹಲ್‌ನಲ್ಲಿ ನಡೆದ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು, 'ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಮಹಾ ಜಂಗಲ್‌ರಾಜ್' ನ ಅಧ್ಯಕ್ಷತೆ ವಹಿಸಿದ್ದು, ಅವರ ಸರ್ಕಾರವು ಬುಡಕಟ್ಟು ವಿರೋಧಿಯಾಗಿದೆ' ಎಂದರು.
'ಟಿಎಂಸಿಯ ಅಧಿಕಾರಶಾಹಿ ಗುಂಪು ಬುಡಕಟ್ಟು ಜನರ ಜಮೀನು ಕಸಿದುಕೊಂಡಿದೆ. ಭ್ರಷ್ಟಾಚಾರ ಮತ್ತು ದುರಾಡಳಿತದ ಮೂಲಕ ಅವರು ವಾಸಿಸುವ ಪ್ರದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಒಳನುಸುಳುವಿಕೆ ಹೆಚ್ಚಿರುವುದರಿಂದ ಬಂಗಾಳದ ಸಂತಾಲಿ ಭಾಷೆ ಮತ್ತು ಬುಡಕಟ್ಟು ಅಸ್ಮಿತೆಗೆ ಕುತ್ತು ಎದುರಾಗಿದೆ' ಎಂದರು.
'ಟಿಎಂಸಿಯ ನಿರ್ದಯಿ ಸರ್ಕಾರವು ಜನರನ್ನು ಸುಲಿಗೆ ಮಾಡುವುದರಲ್ಲಿ ನಿರತವಾಗಿದೆಯೇ ಹೊರತು ಅಭಿವೃದ್ಧಿಗೆ ಗಮನ ಹರಿಸಿಲ್ಲ. ಬಜೆಟ್‌ನಲ್ಲಿ ಮದರಸಾಗಳ ಅಭಿವೃದ್ಧಿಗಷ್ಟೇ ದಾಖಲೆ ಪ್ರಮಾಣದಲ್ಲಿ ಅನುದಾನ ಮೀಸಲಿಡಲಾಗಿದೆ. ಪುರುಲಿಯಾ, ಬಂಕುರಾ ಮತ್ತು ಜಾರ್ಗ್ರಾಮ್ ಪ್ರದೇಶಗಳ ಬುಡಕಟ್ಟು ಜನರಿಗೆ ಭಯ ಮತ್ತು ಸುಲಿಗೆಯಿಂದ ಸ್ವಾತಂತ್ರ್ಯ ಬೇಕಿದ್ದು, ಅವರು ಬಿಜೆಪಿಯತ್ತ ಹೊರಳುತ್ತಿದ್ದಾರೆ. ಬಂಗಳಾದಲ್ಲಿ 'ಬದಲಾವಣೆ ಬೇಕಿದೆ' ಎಂಬ ಕೂಗು ಹೆಚ್ಚುತ್ತಿದೆ' ಎಂದು ಪ್ರಧಾನಿ ಹೇಳಿದರು.
ಮಹಿಳಾ ಮೀಸಲು ಕಾನೂನಿಗೆ ತಿದ್ದುಪಡಿ ಮಾಡುವ ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026 ಅಂಗೀಕಾರಗೊಳ್ಳುವುದನ್ನು ತಡೆಯುವ ಮೂಲಕ ಟಿಎಂಸಿ ಮಹಿಳೆಯರಿಗೆ ದ್ರೋಹ ಮಾಡಿದೆ. ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಪ್ರಧಾನಿ ಬಂಕುರಾ ಜಿಲ್ಲೆಯ ವಿಷ್ಣುಪುರದಲ್ಲಿ ನಡೆದ ರ್‍ಯಾಲಿಯಲ್ಲಿ ವಾಗ್ದಾಳಿ ನಡೆಸಿದರು.
ಮಹಿಳೆಯರಿಗೆ ನ್ಯಾಯ ಖಚಿತಪಡಿಸುತ್ತೇವೆ: ಶಾ
ಈರೋಡ್/ತಮಿಳುನಾಡ: 'ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ಮತ್ತು ಡಿಎಂಕೆ ಮಹಿಳೆಯರನ್ನು ವಂಚಿಸಿವೆ. ಆದರೆ ಬಿಜೆಪಿ ಮಹಿಳೆಯರಿಗೆ ನ್ಯಾಯವನ್ನು ಖಚಿತಪಡಿಸುತ್ತದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈರೋಡ್ ಜಿಲ್ಲೆಯ ಮೊದಕುರುಚಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಅವರು ಮತಯಾಚನೆ ಮಾಡಿದರು.
'ತಮಿಳುನಾಡಿನಲ್ಲಿ ಎಐಎಡಿಎಂಕೆ ಮುಖಂಡ ಇ.ಕೆ ಪಳನಿಸ್ವಾಮಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚಿಸಲಿದೆ' ಎಂದು ಮೊದಕುರುಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾರ್ತಿಕಾ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಡಿಎಂಕೆಯ ವಂಶಪಾರಂಪರ್ಯ ರಾಜಕಾರಣವನ್ನು ಟೀಕಿಸಿದ ಅಮಿತ್ ಶಾ 'ಮುಖ್ಯಮಂತ್ರಿ ಸ್ಟಾಲಿನ್ ಅವರು ತಮ್ಮ ಪುತ್ರ ಉದಯನಿಧಿಯನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಕಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ' ಎಂದರು.

