HEALTH TIPS

ಪಶ್ಚಿಮ ಬಂಗಾಳ ಚುನಾವಣೆ: 7 ಲಕ್ಷ ಮತದಾರರ ಸೇರ್ಪಡೆ

ಕೋಲ್ಕತ್ತ/ನವದೆಹಲಿ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗೆ ಸುಮಾರು 7 ಲಕ್ಷ ಮತದಾರರ ಹೆಸರನ್ನು ಚುನಾವಣಾ ಆಯೋಗವು ಸೇರಿಸಿದೆ. ಆದರೆ, ಈ ಪೈಕಿ ಎಷ್ಟು ಮಂದಿ ಹೊಸ ಮತದಾರರು, ಇವರ ಲಿಂಗ ಮತ್ತು ವಯಸ್ಸಿನ ಮಾಹಿತಿಗಳನ್ನು ಆಯೋಗ ಪ್ರಕಟಿಸಿಲ್ಲ.

'ಸುಮಾರು 3.22 ಲಕ್ಷ ಮತದಾರರು ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಮತದಾನದಲ್ಲಿ ಮತ ಚಲಾಯಿಸಲಿದ್ದಾರೆ.

ಉಳಿದ ಸುಮಾರು 3.88 ಲಕ್ಷ ಮತದಾರರು ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸುವರು' ಎಂದು ಆಯೋಗದ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದರು.

ರಾಜ್ಯದ ಒಟ್ಟು ಮತದಾರರ ಸಂಖ್ಯೆಯು ಈಗ 6.82 ಕೋಟಿಯಷ್ಟಾಗಿದೆ. ಸುಪ್ರೀಂ ಕೋರ್ಟ್‌ ರಚಿಸಿರುವ ಮಂಡಳಿಯು ಇನ್ನಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಿದರೆ, ಈ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ.

ಮತದಾರರ ಪಟ್ಟಿಗೆ ಸೇರಿಸಲು ಆಯೋಗಕ್ಕೆ ಸಲ್ಲಿಕೆಯಾಗಿರುವ ಫಾರಂ 6ರ ಸಂಖ್ಯೆ ಮತ್ತು ಈ ಪೈಕಿ ತಿರಸ್ಕರಿಸಲಾದ ಅರ್ಜಿಗಳ ಸಂಖ್ಯೆಯ ಬಗ್ಗೆಯೂ ಆಯೋಗವು ಮಾಹಿತಿ ಬಿಡುಗಡೆ ಮಾಡಿಲ್ಲ.

'ನಿಯಮಗಳ ಅನುಸಾರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ವಿಸ್ತೃತ ದತ್ತಾಂಶಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿದೆ. ಅಗತ್ಯ ಬಿದ್ದರೆ ಈ ದತ್ತಾಂಶಗಳನ್ನು ಬಿಡುಗಡೆ ಮಾಡಲಾಗುವುದು' ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

'ಎಸ್‌ಐಆರ್‌ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಿ'

'ಎಸ್‌ಐಆರ್‌ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಿ. ಇದು ನಾಗರಿಕರ ಹಕ್ಕಿಗೆ ವಿರುದ್ಧವಾಗಿದೆ. ಎಸ್‌ಐಆರ್‌ ಬಳಿಕ ಸಿದ್ಧಪಡಿಸಲಾದ ಪಟ್ಟಿಯನ್ನು ಕೈಬಿಟ್ಟು ಹಳೆಯ ಮತದಾರರ ಪಟ್ಟಿಯ ಆಧಾರದಲ್ಲಿಯೇ ಚುನಾವಣೆಗಳನ್ನು ನಡೆಸಿ' ಎಂದು ಚಿಂತಕರು ವಕೀಲರು ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಗುಂಪು ಒತ್ತಾಯಿಸಿದೆ.

'ಜನಹಸ್ತಕ್ಷೇಪ' ಎಂಬ ಮಾನವ ಹಕ್ಕುಗಳ ಸಂಘಟನೆ ನವದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಸರ್ವಾನುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ.

'ಪಶ್ಚಿಮ ಬಂಗಾಳವೂ ಸೇರಿ ದೇಶದಾದ್ಯಂತ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಿ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಸಲ್ಲಿಸಿದ ಆಕ್ಷೇಪಣೆಗಳನ್ನು ಸೂಕ್ತವಾಗಿ ಇತ್ಯರ್ಥಪಡಿಸಿ. ಅವರಿಗೂ ಮತದಾನ ಮಾಡಲು ಅವಕಾಶ ನೀಡಿ. ಅಥವಾ 2025ರಲ್ಲಿ ಪ್ರಕಟಿಸಲಾದ ಪರಿಷ್ಕೃತ ಮತದಾರರ ಪಟ್ಟಿಯ ಆಧಾರದಲ್ಲಿಯೇ ಮತದಾನಕ್ಕೆ ಅವಕಾಶ ನೀಡಿ' ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

'ಹೀಗೆ ಮಾಡದೆ ಇದ್ದರೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆಗೆ ಅರ್ಥವೇ ಇರುವುದಿಲ್ಲ. ಯಾರು ನಾಗರಿಕರು ಎನ್ನುವುದನ್ನು ಗುರುತಿಸುವ ಜವಾಬ್ದಾರಿ ಕೇಂದ್ರ ಗೃಹ ಸಚಿವಾಲಯದ್ದು' ಎಂದು ಹೇಳಲಾಗಿದೆ. ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಬದ್ರಿ ರೈನಾ ಪ್ರೆಸ್‌ಕ್ಲಬ್‌ ಅಧ್ಯಕ್ಷೆ ಸಂಗೀತಾ ಬೋರಾ ಸೇರಿದಂತೆ ಹಲವರು ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದರು.

ಕೋಲ್ಕತ್ತ ಡಿಸಿಪಿ ನಿವಾಸದ ಮೇಲೆ ಇ.ಡಿ ದಾಳಿ

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತ್ತದ ಡಿಸಿಪಿ ಶಾಂತನು ಸಿನ್ಹಾ ಬಿಸ್ವಾಸ್‌ ಅವರಿಗೆ ಸೇರಿದ ಎರಡು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಭಾನುವಾರ ಶೋಧ ನಡೆಸಿದೆ. ಇವರ ಜೊತೆ ಉದ್ಯಮಿ ಜಾಯ್‌ ಕಾಮ್‌ದಾರ್‌ ಅವರಿಗೆ ಸೇರಿದ ಜಾಗಗಳಲ್ಲಿಯೂ ಶೋಧ ನಡೆಸಿದ್ದು ಜಾಯ್‌ ಅವರನ್ನು ಸಂಜೆ ಬಂಧಿಸಲಾಗಿದೆ. ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಈ ದಾಳಿ ನಡೆದಿರುವುದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ದಾಳಿಯ ವೇಳೆ ₹67.64 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳ ಜೊತೆಯಲ್ಲಿ ₹1.47 ಕೋಟಿ ನಗದು ದೊರೆತಿದೆ. ದಾಳಿ ವೇಳೆ ಡಿಸಿಪಿ ಶಾಂತನು ಅವರು ತಮ್ಮ ನಿವಾಸದಲ್ಲಿ ಇರಲಿಲ್ಲ.

ಸನ್‌ ಎಂಟರ್‌ಪ್ರೈಸಸ್‌ ಎನ್ನುವ ಕಂಪನಿಯಲ್ಲಿ ಜಾಯ್‌ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ದಾಳಿಗಳನ್ನು ನಡೆಸಲಾಗಿದೆ. ಅಪರಾಧ ಹಿನ್ನಲೆಯ ಸೋನಾ ಪಪ್ಪು ಎಂಬುವರು ಭಾಗಿಯಾಗಿದ್ದ ಹಣದ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಇ.ಡಿ ಈ ದಾಳಿಗಳನ್ನು ನಡೆಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ಏಪ್ರಿಲ್‌ 1ರಂದು ಮೊದಲ ಬಾರಿಗೆ ದಾಳಿ ನಡೆಸಿತ್ತು. ಸೋನಾ ಪಪ್ಪು ವಿರುದ್ಧ ಹತ್ಯೆ ಮತ್ತು ಸುಲಿಗೆ ಆರೋಪದಡಿ ಪ್ರಕರಣಗಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries