ನವದೆಹಲಿ: ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಎಡಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿವೆ. ಅಲ್ಲದೆ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.
ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರಲು ಸಾರ್ವಜನಿಕ ಪ್ರಸಾರ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಮತ್ತು ಸಿಪಿಐ ರಾಜ್ಯಸಭಾ ಸಂಸದ ಪಿ. ಸಂದೋಷ್ ಕುಮಾರ್ ಅವರು ಚುನಾವಣಾ ಆಯುಕ್ತರಿಗೆ ಬರೆ ಪ್ರತ್ಯೇಕ ಪತ್ರಗಳಲ್ಲಿ ಹೇಳಿದ್ದಾರೆ.
ಚುನಾವಣಾ ಸಮಿತಿಯ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಬೇಬಿ ಅವರು, ಪ್ರಧಾನಿಯವರು 'ರಾಜಕೀಯ ಭಾಷಣ ಮಾಡಲು ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ದೂರದರ್ಶನವನ್ನು ದುರುಪಯೋಗಪಡಿಸಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆ. ಈ ಭಾಷಣದ ವಿಷಯ, ಸಂದೇಶವನ್ನು ಯಾವುದೇ ಕಾರಣಕ್ಕೂ ಸರ್ಕಾರದ ಸಂವಹನ ಎಂದು ಕರೆಯಲು ಸಾಧ್ಯವಿಲ್ಲ ಎಂದು ಬೇಬಿಯವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾಷಣ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದ್ದು, ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿದೆ. ಅವುಗಳಲ್ಲಿ ಹಲವು ಪಕ್ಷಗಳ ಹೆಸರನ್ನು ಪ್ರಸ್ತಾಪಿಸಲಾಗಿದೆ. ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಮತದಾರರು ಸೇರಿದಂತೆ ಸಾರ್ವಜನಿಕರ ಮೇಲೆ ಆಡಳಿತ ಪಕ್ಷದ ಪರವಾಗಿ ಪ್ರಭಾವ ಬೀರಲು ಪ್ರಯತ್ನಿಸಿದೆ ಎಂದು ಅವರು ತಿಳಿಸಿದ್ದಾರೆ.
ದೂರದರ್ಶನ ಮತ್ತು ಸಂಸದ್ ಟಿವಿಯಂತಹ ಸಾರ್ವಜನಿಕ ವೇದಿಕೆಗಳಲ್ಲಿ ಈ ಭಾಷಣವನ್ನು ಪ್ರಸಾರ ಮಾಡಿರುವುದು ಸರ್ಕಾರದ ಸಂಪನ್ಮೂಲಗಳ ದುರುಪಯೋಗವಾಗಿದೆ. ರಾಜಕೀಯ ಭಾಷಣಕ್ಕೆ ಸಾರ್ವಜನಿಕ ಅನುದಾನಿತ ವೇದಿಕೆಗಳನ್ನು ಬಳಸುವುದು ಚುನಾವಣಾ ಮಾನದಂಡಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಸಿಪಿಐ ನಾಯಕ ಪಿ. ಸಂದೋಷ್ ಕುಮಾರ್ ಹೇಳಿದ್ದಾರೆ.
ಇದರ ವಿರುದ್ಧ ಚುನಾವಣಾ ಆಯೋಗ ತುರ್ತು ಹಾಗೂ ಪ್ರಾಮಾಣಿಕ ಕ್ರಮ ತೆಗೆದುಕೊಳ್ಳಬೇಕು.ಈ ಬಗ್ಗೆ ತನಿಖೆ ಆರಂಭಿಸಬೇಕು. ಕ್ರಮ ಕೈಗೊಳ್ಳಲು ವಿಫಲವಾದರೆ ಅದು ಚುನಾವಣಾ ಆಯೋಗದ ನಿಷ್ಪಕ್ಷಪಾತದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸಬಹುದು ಎಂದು ಅವರು ಹೇಳಿದ್ದಾರೆ.

