ಪತನಗೊಂಡ ಎಫ್-15ಇ ಸ್ಟ್ರೈಕ್ ಈಗಲ್ (F-15E Strike Eagle) ಯುದ್ಧ ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಇದ್ದರು. ವಿಮಾನ ಪತನಗೊಳ್ಳುವ ಮುನ್ನ ಅವರು ವಿಮಾನದಿಂದ ಜಿಗಿದಿದ್ದಾರೆ ಎಂದು ಅಮೆರಿಕದ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರ ಪೈಕಿ ಒಬ್ಬರನ್ನು ರಕ್ಷಿಸಲಾಗಿದ್ದು, ಮತ್ತೊಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಲ್ಲದೆ, ಅಮೆರಿಕ ವಾಯುಪಡೆಯ ಮತ್ತೊಂದು ಯುದ್ಧ ವಿಮಾನವಾದ ಎ-10 ವಾರ್ತ್‌ಹಾಗ್ ಶುಕ್ರವಾರ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಪತನಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಅಮೆರಿಕದ ಇಬ್ಬರು ಅಧಿಕಾರಿಗಳು , ಅದರಲ್ಲಿದ್ದ ಏಕೈಕ ಪೈಲಟ್ ಅನ್ನು ರಕ್ಷಿಸಲಾಗಿದೆ. ಆದರೆ ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
ಅಮೆರಿಕ ತನ್ನ ಮಿಲಿಟರಿ ಗುರಿಗಳನ್ನು ಸಾಧಿಸುವತ್ತ ಸಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಎರಡೇ ದಿನದಲ್ಲಿ ಶುಕ್ರವಾರ ಇರಾನ್ ನೈಋತ್ಯ ಭಾಗದಲ್ಲಿ ಅಮೆರಿಕದ ಎಫ್-15ಇ ವಿಮಾನವನ್ನು ಹೊಡೆದು ಉರುಳಿಸಲಾಗಿದೆ. 'ಮುಂದಿನ ಎರಡು ಮೂರು ವಾರಗಳಲ್ಲಿ ನಾವು ಅವರನ್ನು (ಇರಾನ್) ಶಿಲಾಯುಗಕ್ಕೆ ಕಳುಹಿಸಲಿದ್ದೇವೆ, ಅವರು ಅಲ್ಲಿಗೇ ಅರ್ಹರು' ಎಂದು ಹೇಳಿದ್ದ ಟ್ರಂಪ್ ಇನ್ನಷ್ಟು ತೀವ್ರ ದಾಳಿ ನಡೆಸುವ ಮುನ್ಸೂಚನೆ ನೀಡಿದ್ದರು. ಆದರೆ ಬಲಿಷ್ಠ ವಿಮಾನವನ್ನೇ ಇರಾನ್ ಹೊಡೆದುರುಳಿಸಿದೆ.
ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆಯು ಪತನಗೊಂಡ ವಿಮಾನ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಲಂಡನ್‌ನ ರಾಯಲ್ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್‌ನ ವಾಯು ಶಕ್ತಿ ಮತ್ತು ತಂತ್ರಜ್ಞಾನದ ಸಂಶೋಧಕ ಜಸ್ಟಿನ್ ಬ್ರಾಂಕ್ ಪ್ರಕಾರ, ಈ ಚಿತ್ರಗಳು ಅಮೆರಿಕ ವಾಯುಪಡೆಯ ಎಫ್-15ಇ ಸ್ಟ್ರೈಕ್ ಈಗಲ್‌ನ ರೆಕ್ಕೆ ಮತ್ತು ಸ್ಟೆಬಿಲೈಸರ್ ಭಾಗಗಳನ್ನು ತೋರಿಸುತ್ತವೆ. ಬ್ರಿಟನ್‌ನ ಆರ್‌ಎಎಫ್ ಲೇಕನ್‌ಹೀತ್‌ನಲ್ಲಿರುವ 494ನೇ ಫೈಟರ್ ಸ್ಕ್ವಾಡ್ರನ್‌ಗೆ ಈ ವಿಮಾನ ಸೇರಿದೆ ಎಂಬುದನ್ನು ಅದರ ಮೇಲಿನ ಗುರುತುಗಳು ಖಚಿತಪಡಿಸುತ್ತವೆ ಎಂದು ಅವರು ತಿಳಿಸಿದ್ದಾರೆ. ವಿಮಾನ ಹೊಡೆದುರುಳಿಸಿದ ಬಗ್ಗೆ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.
ಪತನಗೊಂಡ ಎಫ್-15ಇ ಸ್ಟ್ರೈಕ್ ಈಗಲ್ ಯುದ್ಧ ವಿಮಾನದಲ್ಲಿ ರಡಾರ್‌ಗೆ ಸಿಗದ 'ಸ್ಟೆಲ್ತ್' ತಂತ್ರಜ್ಞಾನ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1986ರಲ್ಲಿ ಪರಿಚಯಿಸಲಾದ ಈ ವಿಮಾನವು ಆಕಾಶದಿಂದ ಭೂಮಿಗೆ ಮತ್ತು ಆಕಾಶದಿಂದ ಆಕಾಶಕ್ಕೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಅಮೆರಿಕ ವಾಯುಪಡೆಯ ಪ್ರಕಾರ, ಇದರಲ್ಲಿ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿ ಸೇರಿ ಇಬ್ಬರು ಸಿಬ್ಬಂದಿ ಇರುತ್ತಾರೆ. ಇದು ಗಂಟೆಗೆ 1,875 ಮೈಲಿ ವೇಗದಲ್ಲಿ ಚಲಿಸಬಲ್ಲದು. 9 ಸಾವಿರ ಕೆ.ಜಿಗೂ ಅಧಿಕ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು. ಈ ಯುದ್ಧ ವಿಮಾನವನ್ನು ಅಮೆರಿಕದ ಸೇನೆಯು ಇರಾಕ್, ಲಿಬಿಯಾ ಮತ್ತು ಸಿರಿಯಾದಲ್ಲಿ ಈ ಹಿಂದೆ ಬಳಸಿದೆ.

