ವಿಶ್ವಸಂಸ್ಥೆ: ಸೇನಾ ಶಕ್ತಿ ಬಳಸಿ ಹೊರ್ಮುಜ್ ಜಲಸಂಧಿಯನ್ನು ಜಾಗತಿಕ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಪ್ರಸ್ತಾವವನ್ನು ರಷ್ಯಾ ಮತ್ತು ಚೀನಾ ವಿರೋಧದ ಮಧ್ಯೆಯೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತಕ್ಕೆ ಹಾಕಲು ನಿರ್ಧರಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಸೃಷ್ಟಿಯಾದ ನಂತರ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ.
ವಿಶ್ವದ ಐದನೇ ಒಂದರಷ್ಟು ತೈಲ ಈ ಮಾರ್ಗದಿಂದ ಸಾಗಣೆಯಾಗುತ್ತದೆ. ಹಡಗು ಸಂಚಾರಕ್ಕೆ ಆದ ಅಡ್ಡಿಯು ಜಾಗತಿಕವಾಗಿ ತೈಲ ಬೆಲೆಯ ಭಾರಿ ಏರಿಕೆ ಮತ್ತು ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಿದೆ.
ಹೊರ್ಮುಜ್ ಜಲಸಂಧಿಯನ್ನು ಸೇನಾ ಪಡೆ ಬಳಸಿ ಮುಕ್ತಗೊಳಿಸುವ ಪ್ರಸ್ತಾವ ಇದಾಗಿದೆ. ಆದರೆ ಭದ್ರತಾ ಮಂಡಳಿಯಲ್ಲಿ ವಿಟೋ ಅಧಿಕಾರ ಹೊಂದಿರುವ 15 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಮತ್ತು ರಷ್ಯಾ ಸೇನಾ ಬಲ ಬಳಕೆಗೆ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆಯೂ 'ಬಹರೇನ್ ಪ್ರಸ್ತಾವ'ದ ಕರಡು ಅಂತಿಮಗೊಂಡಿದೆ.
ಯಾವುದೇ ಹಾನಿ ಮಾಡದೇ ರಕ್ಷಣಾತ್ಮಕವಾಗಿ ಪಡೆಗಳನ್ನು ಬಳಸಬೇಕು ಎಂಬ ಅಂಶ ಪ್ರಸ್ತಾವದಲ್ಲಿದೆ. ಬಹುರಾಷ್ಟ್ರೀಯ ನೌಕಾ ಪಾಲುದಾರಿಕೆ ಹೊಂದಿರುವ ದೇಶಗಳು 'ಹೊರ್ಮುಜ್ ಜಲಸಂಧಿ, ಗಲ್ಫ್ ಮತ್ತು ಗಲ್ಫ್ ಆಫ್ ಒಮನ್'ನಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ 'ಎಲ್ಲ ಅಗತ್ಯ ವಿಧಾನ ಅನುಸರಿಸಲು ಅವಕಾಶ ಕಲ್ಪಿಸುತ್ತದೆ.' ವಿಶ್ವಸಂಸ್ಥೆ ಪ್ರಕಾರ ಸೇನಾ ಕಾರ್ಯಾಚರಣೆಯ ಸಾಧ್ಯತೆಯೂ ಇದರಲ್ಲಿದೆ.
ಕನಿಷ್ಠ ಆರು ತಿಂಗಳವರೆಗಾದರೂ ಈ ಮಾರ್ಗವನ್ನು ಅಂತರರಾಷ್ಟ್ರೀಯ ಹಡಗು ಸಂಚಾರಕ್ಕೆ ಸುರಕ್ಷಿತಗೊಳಿಸಲು ಹೊಣೆ ಹೊತ್ತ ರಾಷ್ಟ್ರಗಳು ಎಲ್ಲ ರೀತಿಯ ರಕ್ಷಣಾತ್ಮಕ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ 'ಮುಂಚಿತವಾಗಿ ಭದ್ರತಾ ಮಂಡಳಿಯ ಗಮನಕ್ಕೆ ತರಬೇಕು' ಎಂಬ ಅಂಶ ಪ್ರಸ್ತಾವದಲ್ಲಿದೆ.

