ಇ-ಸ್ಪೋರ್ಟ್ ಗಳ ಬೆಳವಣಿಗೆಗೆ ಉತ್ತೇಜನ ನೀಡುವ ಜೊತೆಗೆ ಅಪಾಯಕಾರಿಯಾದ ಹಣದ ಜೂಜಾಟವನ್ನು ನಿಯಂತ್ರಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.
ಈ ನಿಯಮಾವಳಿಗಳ ಪ್ರಕಾರ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ "ಭಾರತೀಯ ಆನ್ಲೈನ್ ಗೇಮಿಂಗ್ ಪ್ರಾಧಿಕಾರ" ಎಂಬ ಕೇಂದ್ರೀಯ ಸಂಸ್ಥೆ ಸ್ಥಾಪನೆಯಾಗಲಿದೆ. ದಿಲ್ಲಿಯಿಂದ ಕಾರ್ಯನಿರ್ವಹಿಸುವ ಈ ಸಂಸ್ಥೆ ಆನ್ಲೈನ್ ಗೇಮ್ ಗಳ ವರ್ಗೀಕರಣ, ದೂರುಗಳ ನಿರ್ವಹಣೆ ಹಾಗೂ ಹಣಕಾಸು ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಿದೆ.
ಆನ್ ಲೈನ್ ಗೇಮ್ ಗಳ ಸ್ಪಷ್ಟ ವರ್ಗೀಕರಣ:
ಯಾವುದೇ ಗೇಮ್ ಹಣದ ಜೂಜಾಟವೇ, ಅನುಮತಿಸಲ್ಪಟ್ಟ ಇ-ಸ್ಪೋರ್ಟ್ ಅಥವಾ ಸಾಮಾಜಿಕ ಆಟವೇ ಎಂಬುದನ್ನು ಈ ವ್ಯವಸ್ಥೆಯಡಿ ನಿರ್ಧರಿಸಲಾಗುವುದು. ಪ್ರವೇಶ ಶುಲ್ಕ, ಬಹುಮಾನಗಳ ಸ್ವರೂಪ ಮತ್ತು ಹಣ ಗಳಿಸುವ ವಿಧಾನಗಳ ಆಧಾರದ ಮೇಲೆ ಮೌಲ್ಯಮಾಪನ ನಡೆಯಲಿದೆ. ಇಂತಹ ಪ್ರಕರಣಗಳನ್ನು 90 ದಿನಗಳೊಳಗೆ ನಿರ್ಧರಿಸುವ ನಿರೀಕ್ಷೆಯಿದೆ.
ಬಳಕೆದಾರರ ಸುರಕ್ಷತೆ:
ವಯೋ ದೃಢೀಕರಣ, ಪೋಷಕರ ನಿಯಂತ್ರಣ, ಸಮಯ ಮಿತಿ ಹಾಗೂ ವರದಿ ಸಾಧನಗಳನ್ನು ಕಡ್ಡಾಯಗೊಳಿಸಲಾಗುತ್ತದೆ.
ಎರಡು ಹಂತದ ದೂರು ವ್ಯವಸ್ಥೆ:
ಮೊದಲು ಗೇಮಿಂಗ್ ವೇದಿಕೆಗೆ ದೂರು ಸಲ್ಲಿಸಬಹುದು. ತೃಪ್ತಿಯಾಗದಿದ್ದರೆ ಪ್ರಾಧಿಕಾರಕ್ಕೆ, ನಂತರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಮನವಿ ಮಾಡಬಹುದು. ಪ್ರತಿ ಹಂತದಲ್ಲಿ 30 ದಿನಗಳೊಳಗೆ ಪರಿಹಾರ ನಿರೀಕ್ಷಿಸಲಾಗಿದೆ.
ಕಟ್ಟುನಿಟ್ಟಿನ ಅನುಷ್ಠಾನ:
ನಿಯಮ ಉಲ್ಲಂಘಿಸಿದ ವೇದಿಕೆಗಳಿಗೆ ದಂಡ ವಿಧಿಸಲಾಗುತ್ತದೆ. ಪ್ರಕರಣಗಳನ್ನು 90 ದಿನಗಳೊಳಗೆ ಇತ್ಯರ್ಥಪಡಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

