ಮುಂಬೈ: ಮಾಲೆಗಾಂವ್‌ನಲ್ಲಿ 31 ಜನರನ್ನು ಬಲಿ ತೆಗೆದುಕೊಂಡಿದ್ದ ಬಾಂಬ್ ಸ್ಫೋಟಗಳ ಸುಮಾರು ಎರಡು ದಶಕಗಳ ಬಳಿಕ ಬುಧವಾರ ಬಾಂಬೆ ಉಚ್ಚ ನ್ಯಾಯಾಲಯವು ಪ್ರಕರಣದಲ್ಲಿ ಕೊನೆಯದಾಗಿ ಉಳಿದುಕೊಂಡಿದ್ದ ನಾಲ್ವರು ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ಇದರೊಂದಿಗೆ ಈ ಘೋರ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಲು ಯಾರೂ ಇಲ್ಲದಂತಾಗಿದೆ.
ಮುಖ್ಯ ನ್ಯಾಯಮೂರ್ತಿ ಶ್ರೀಚಂದ್ರಶೇಖರ ಮತ್ತು ನ್ಯಾ.ಶ್ಯಾಮ ಸಿ.ಚಂಡಕ್ ಅವರ ಪೀಠವು ಮನೋಹರ ನರ್ವಾರಿಯಾ, ರಾಜೇಂದ್ರ ಚೌಧರಿ, ಧನ ಸಿಂಗ್ ಮತ್ತು ಲೋಕೇಶ್ ಶರ್ಮಾ ಅವರ ವಿರುದ್ಧ ಆರೋಪಗಳನ್ನು ರೂಪಿಸಿದ್ದ ವಿಶೇಷ ನ್ಯಾಯಾಲಯದ ಸೆ.30, 2025ರ ಆದೇಶವನ್ನು ರದ್ದುಗೊಳಿಸಿತು. ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಗಳನ್ನು ಸಲ್ಲಿಸಿದ್ದರು.
ಈ ತೀರ್ಪಿನೊಂದಿಗೆ ಕಳೆದ 20 ವರ್ಷಗಳಿಂದಲೂ ಮುಂದುವರಿದಿದ್ದ ಪ್ರಕರಣಕ್ಕೆ ಸದ್ಯಕ್ಕೆ ಅಂತಿಮ ತೆರೆ ಬಿದ್ದಿದೆ. ಮೂರು ತನಿಖಾ ಸಂಸ್ಥೆಗಳಿಂದ ನಡೆದಿದ್ದ ಪ್ರಕರಣದ ತನಿಖೆಯಲ್ಲಿ ದಾಳಿಗೆ ಹೊಣೆಯಾದವರ ಕುರಿತು ಪರಸ್ಪರ ತದ್ವಿರುದ್ಧವಾದ ಎರಡು ಸಿದ್ಧಾಂತಗಳು ಹೊರಹೊಮ್ಮಿದ್ದವು ಮತ್ತು 20 ವರ್ಷಗಳ ಬಳಿಕವೂ ಯಾರಿಗೂ ಶಿಕ್ಷೆಯಾಗಿಲ್ಲ.
ಸೆ.8, 2006ರಂದು ಮಾಲೆಗಾಂವ್‌ನ ಮಸೀದಿ ಮತ್ತು ಸ್ಮಶಾನದ ಬಳಿ ಬಾಂಬ್ ಸ್ಫೋಟಗಳು ಸಂಭವಿಸಿ 31ಜನರು ಮೃತಪಟ್ಟಿದ್ದರು ಮತ್ತು 312 ಜನರು ಗಾಯಗೊಂಡಿದ್ದರು. ಈ ಘಟನೆಯ ಬೆನ್ನಲ್ಲೇ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್) ಒಂಭತ್ತು ಮುಸ್ಲಿಂ ಪುರುಷರನ್ನು ಬಂಧಿಸಿತ್ತು. 2007ರಲ್ಲಿ ಸಿಬಿಐ ಪ್ರಕರಣವನ್ನು ವಹಿಸಿಕೊಂಡಾಗಲೂ ಇವರು ಆರೋಪಿಗಳಾಗಿಯೇ ಮುಂದುವರಿದಿದ್ದರು. ನಾಲ್ಕು ವರ್ಷಗಳ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) ತನಿಖೆಯನ್ನು ಕೈಗೆತ್ತಿಕೊಂಡಿದ್ದು ಪ್ರಕರಣದ ದಿಕ್ಕನ್ನೇ ಬದಲಿಸಿತ್ತು. ಬಂಧಿತ ಒಂಭತ್ತು ಮುಸ್ಲಿಂ ವ್ಯಕ್ತಿಗಳು ಅಮಾಯಕರಾಗಿದ್ದಾರೆ ಎಂದು ಘೋಷಿಸಿದ್ದ ಅದು ಹಿಂದುತ್ವ ಕಾರ್ಯಕರ್ತರ ಜಾಲದತ್ತ ಬೆಟ್ಟು ಮಾಡಿತ್ತು.
ಇದಕ್ಕೆ ಆಧಾರವಾಗಿದ್ದು ಸ್ವಾಮಿ ಅಸೀಮಾನಂದ ಅವರು ಡಿಸೆಂಬರ್ 2010ರಲ್ಲಿ ನೀಡಿದ್ದ ಹೇಳಿಕೆ. ಇತರ ಸ್ಫೋಟ ಪ್ರಕರಣಗಳಲ್ಲಿ ಅದಾಗಲೇ ಕಸ್ಟಡಿಯಲ್ಲಿದ್ದ ಅಸೀಮಾನಂದ, ತನ್ನ ಹುಡುಗರು ಮಾಲೆಗಾಂವ್ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಹಿಂದುತ್ವ ಕಾಯರ್ತಕರ್ತ ಸುನಿಲ ಜೋಶಿ ತನಗೆ ಹೇಳಿದ್ದಾಗಿ ತಿಳಿಸಿದ್ದರು. ಇದನ್ನು ಆಧರಿಸಿ ಎನ್‌ಐಎ ನಾಲ್ವರು ಮೇಲ್ಮನವಿದಾರರ ಜೊತೆಗೆ ಮೃತ ಜೋಶಿ ಮತ್ತು ಈಗಲೂ ತಲೆ ಮರೆಸಿಕೊಂಡಿರುವ ಇತರ ಮೂವರ ವಿರುದ್ಧ ಹೊಸ ದೋಷಾರೋಪಣೆ ಪಟ್ಟಿಯನ್ನು ರೂಪಿಸಿತ್ತು.
ಆದರೆ ಶೀಘ್ರವೇ ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದ ಅಸೀಮಾನಂದ ಅದನ್ನು ತನಗೆ ಚಿತ್ರಹಿಂಸೆ ನೀಡಿ ಪಡೆಯಲಾಗಿತ್ತು ಎಂದು ಪ್ರತಿಪಾದಿಸಿದ್ದರು. ಮುಖ್ಯವಾಗಿ ಸಮಜೋತಾ ಎಕ್ಸ್‌ಪ್ರೆಸ್, ಮಕ್ಕಾ ಮಸೀದಿ ಮತ್ತು ಅಜ್ಮೇರ್ ಶರೀಫ್ ಸ್ಫೋಟ ಪ್ರಕರಣಗಳಲ್ಲಿ ಅವರ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯಗಳು ಅವರ ತಪ್ಪೊಪ್ಪಿಗೆಯನ್ನು ವಿಶ್ವಾರ್ಸಾವಲ್ಲ ಎಂದು ತಿರಸ್ಕರಿಸಿದ್ದವು ಮತ್ತು ಅವರನ್ನು ಖುಲಾಸೆಗೊಳಿಸಿದ್ದವು.
ನರ್ವಾರಿಯಾ, ಚೌಧರಿ, ಸಿಂಗ್ ಮತ್ತು ಶರ್ಮಾ ಅವರನ್ನು 2013ರಲ್ಲಿ ಬಂಧಿಸಲಾಗಿತ್ತು. 2019ರಲ್ಲಿ ಉಚ್ಚ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.
ಈ ನಡುವೆ ಆರಂಭದಲ್ಲಿ ಬಂಧಿಸಲಾಗಿದ್ದ ಒಂಭತ್ತು ಮುಸ್ಲಿಂ ವ್ಯಕ್ತಿಗಳನ್ನು 2016ರಲ್ಲಿ ಖುಲಾಸೆಗೊಳಿಸಲಾಗಿತ್ತು. ಇದರ ವಿರುದ್ಧ ಎಟಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯು 2019ರಿಂದಲೂ ವಿಚಾರಣೆಯಾಗದೆ ಬಾಕಿಯುಳಿದಿದೆ.
ಪ್ರತ್ಯೇಕ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಮತ್ತು ಲೆ.ಕ.ಪ್ರಸಾದ ಪುರೋಹಿತ ಸೇರಿದಂತೆ ಎಲ್ಲ ಏಳು ಆರೋಪಿಗಳನ್ನು ವಿಶೇಷ ಎನ್‌ಐಎ ನ್ಯಾಯಾಲಯವು ಕಳೆದ ವರ್ಷ ಖುಲಾಸೆಗೊಳಿಸಿತ್ತು.

