ಹೈದರಾಬಾದ್: ಜಿ-20 ರಾಷ್ಟ್ರಗಳ ಉಪಗ್ರಹವೊಂದನ್ನು ಉಡ್ಡಯನ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗಿದೆ.
'ಹವಾಮಾನ, ವಾಯು ಮಾಲಿನ್ಯ ಹಾಗೂ ವಾತಾವರಣದಲ್ಲಿನ ಬದಲಾವಣೆಗಳ ಮೇಲೆ ನಿಗಾ ಇರಿಸುವ ಉದ್ದೇಶದ ಜಿ-20 ಉಪಗ್ರಹವನ್ನು ಮುಂದಿನ ವರ್ಷ ಉಡ್ಡಯನ ಮಾಡುವ ನಿರೀಕ್ಷೆ ಇದೆ' ಎಂದು ಇಸ್ರೊ ಮುಖ್ಯಸ್ಥ ವಿ.ನಾರಾಯಣನ್ ಶನಿವಾರ ಹೇಳಿದ್ದಾರೆ.
ಎಂಜಿನಿಯರಿಂಗ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ(ಡಿಆರ್‌ಡಿಒ), ಇಸ್ರೊ ಹಾಗೂ ಏರೊನಾಟಿಕಲ್ ಸೊಸೈಟಿ ಆಫ್ ಇಂಡಿಯಾ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು,'ಜಿ-20 ರಾಷ್ಟ್ರಗಳಿಗಾಗಿ ಈ ಉಪಗ್ರಹದ ಅಭಿವೃದ್ಧಿ ಹಾಗೂ ಉಡ್ಡಯನಕ್ಕೆ ಭಾರತವೇ ಮುಂದಾಳತ್ವ ವಹಿಸಲಿದೆ' ಎಂದರು.
ಇಸ್ರೊ ಸಾಧನೆಗಳನ್ನು ಪಟ್ಟಿ ಮಾಡಿದ ಅವರು,'104 ಉಪಗ್ರಹಗಳನ್ನು ಭೂ ಕಕ್ಷೆಗೆ ಯಶಸ್ವಿಯಾಗಿ ಸೇರಿದ ಮೊದಲ ದೇಶ ಭಾರತ. ವಾಣಿಜ್ಯ ಉದ್ದೇಶದ ಉಡ್ಡಯನಗಳನ್ನು ಕೂಡ ಇಸ್ರೊ ಕೈಗೊಂಡಿದೆ. 34 ದೇಶಗಳ 433 ಉಪಗ್ರಹಗಳನ್ನು ಭೂ ಕಕ್ಷೆಗೆ ಸೇರಿಸಲಾಗಿದೆ' ಎಂದು ಹೇಳಿದರು.
'2040ರ ವೇಳೆಗೆ ಚಂದಿರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸುವ ನಿಟ್ಟಿನಲ್ಲಿ ಇಸ್ರೊ ಕಾರ್ಯಕ್ರಮ ಹಾಕಿಕೊಂಡಿದೆ. ಇದು ಕಾರ್ಯಗತವಾದಲ್ಲಿ, ಉಡ್ಡಯನ ತಂತ್ರಜ್ಞಾನ, ಉಪಗ್ರಹ ತಂತ್ರಜ್ಞಾನ, ವಿವಿಧ ಉದ್ದೇಶಗಳಿಗೆ ಬಳಕೆ, ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮಗಳ ವಿಚಾರದಲ್ಲಿ ಸಾಧನೆ ಮಾಡಿರುವ ಹಲವು ದೇಶಗಳ ಸಾಲಿನಲ್ಲಿ ಭಾರತವೂ ನಿಲ್ಲಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
-ವಿ.ನಾರಾಯಣನ್, ಇಸ್ರೊ ಅಧ್ಯಕ್ಷ ಆಳ ಸಾಗರ ಅನ್ವೇಷಣಾ ಕಾರ್ಯಕ್ರಮ 'ಸಮುದ್ರಯಾನ'ಕ್ಕಾಗಿ 2.2 ಮೀ. ವ್ಯಾಸವುಳ್ಳ 100 ಮಿ.ಮೀ. ದಪ್ಪದ ಟೈಟಾನಿಯಂ ನೌಕೆಯನ್ನು ಇಸ್ರೊ ಸಿದ್ಧಪಡಿಸುತ್ತಿದೆ.

