ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 21 ಮಂದಿ ಸ್ಥಳದಲ್ಲೇ ಮೃತಪಟ್ಟು 61 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾಮನಗರದಿಂದ ಉಧಂಪುರಕ್ಕೆ ತೆರಳುತ್ತಿದ್ದ ಬಸ್, ಕನೋತ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪೊಲೀಸರು ಮತ್ತು ವಿಪತ್ತು ನಿರ್ವಹಣಾ ತಂಡಗಳು ಕಾರ್ಯಪ್ರವೃತ್ತವಾಗುವ ಮೊದಲು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಉಧಂಪುರ ಮತ್ತು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಅಪಘಾತ ಕುರಿತು ಉಧಂಪುರ ಜಿಲ್ಲಾಧಿಕಾರಿ ಮಿಂಗಾ ಶೇರ್ಪಾ ಅವರೊಂದಿಗೆ ಚರ್ಚಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಏರ್ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಮನಗರದಿಂದ ಉಧಂಪುರಕ್ಕೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾದ ಸುದ್ದಿ ತಿಳಿದ ಕೂಡಲೇ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ತಕ್ಷಣವೇ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಗಾಯಾಳುಗಳನ್ನು ಏರ್ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಸಾಮಾಜಿಕ ಮಾಧ್ಯಟಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
₹2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ:
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಕರಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ಪರಿಹಾರ ಘೋಷಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚುವರಿ ಪರಿಹಾರ ಘೋಷಿಸಿದ್ದಾರೆ. ಮೃತರ ಕುಟುಂಬಗಳಿಗೆ ₹2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹1 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ₹25,000 ಪರಿಹಾರ ಘೋಷಿಸಿದ್ದಾರೆ.
ಅಪಘಾತಕ್ಕೆ ನಿಖರವಾದ ಕಾರಣ ಪತ್ತೆಮಾಡಲು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರುಕಳಿಸಿದ ದುರಂತಗಳು
2024 ಮೇ- ಜಮ್ಮು ಜಿಲ್ಲೆ (ಚೌಕಿ ಚೌರಾ): ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ 21-22 ಮಂದಿ ಮೃತಪಟ್ಟು, 30 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
2023 ನವೆಂಬರ್: ದೋಡಾ ಜಿಲ್ಲೆ ಬಳಿ ಸಂಭವಿಸಿದ ಅಪಘಾತದಲ್ಲಿ((300 ಅಡಿ ಎತ್ತರದಿಂದ ಬಸ್ ಕಂದಕಕ್ಕೆ ಉರುಳಿತ್ತು) 39 ಜನ ಮೃತಪಟ್ಟು, 17 ಮಂದಿ ಗಾಯಗೊಂಡಿದ್ದರು.
2019 ಜುಲೈ: ಕಿಶ್ತ್ವಾರ್ ಜಿಲ್ಲೆ ಮಿನಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 35 ಜನ ಮೃತಪಟ್ವು, 17 ಮಂದಿ ಗಾಯಗೊಂಡಿದ್ದರು.
2018 ಅಕ್ಟೋಬರ್: ರಂಬನ್ ಜಿಲ್ಲೆಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 21 ಮಂದಿ ಸಾವಿಗೀಡಾಗಿ, 15 ಮಂದಿ ಗಾಯಗೊಂಡಿದ್ದರು.

