ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದ್ವಿಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಕುರಿತ ಪ್ರಕರಣದ ವಿಚಾರಣೆಯಿಂದ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠದ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರು ಸೋಮವಾರ ಹಿಂದೆ ಸರಿದಿದ್ದಾರೆ.
ದೂರುದಾರ ವಿಘ್ನೇಶ್ ಶಿಶಿರ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಯ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ದ್ವಿಪೌರತ್ವ ಆರೋಪಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶ ನೀಡಿ, ಬಳಿಕ ತನ್ನದೇ ಆದೇಶಕ್ಕೆ ತಡೆ ನೀಡಿರುವ ಬಗ್ಗೆ ದೂರುದಾರ ಕರ್ನಾಟಕದ ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಅವರು ನೀಡಿರುವ ಹೇಳಿಕೆಯನ್ನು ನ್ಯಾ.ಸುಭಾಷ್ ವಿದ್ಯಾರ್ಥಿ ಬಲವಾಗಿ ಖಂಡಿಸಿದ್ದಾರೆ.
'ಇದು ನ್ಯಾಯಸಮ್ಮತವಲ್ಲದ ಮತ್ತು ಸ್ವೀಕಾರಾರ್ಹವಲ್ಲದ ವರ್ತನೆಯಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ವಿಚಾರಣೆಗೆ ಹೊಸ ಪೀಠ ರಚಿಸುವಂತೆ ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಮನವಿ ಮಾಡಿರುವ ಸುಭಾಷ್ ಅವರು, 'ದೂರುದಾರರು ತನ್ನನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ' ಎಂದು ಆರೋಪಿಸಿದ್ದಾರೆ.

