ಕೊಲಂಬೊ: ಅಮೆರಿಕದ ದಾಳಿ ಮತ್ತು ಎಂಜಿನ್ ವೈಫಲ್ಯಕ್ಕೀಡಾಗಿದ್ದ ಇರಾನ್‌ನ ಎರಡು ನೌಕೆಗಳಲ್ಲಿದ್ದ 230ಕ್ಕೂ ಅಧಿಕ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಅವರ ದೇಶಕ್ಕೆ ಕಳುಹಿಸಲಾಗಿದೆ ಎಂದು ಶ್ರೀಲಂಕಾ ಸೇನೆಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
238 ಜನರನ್ನು ಮಂಗಳವಾರ ರಾತ್ರಿ ಟರ್ಕಿಯ ವಿಮಾನದಲ್ಲಿ ಕಳುಹಿಸಲಾಗಿದೆ.
ಮಾರ್ಚ್ 4ರಂದು ಶ್ರೀಲಂಕಾದ ಅಂತರರಾಷ್ಟ್ರೀಯ ಸಾಗರ ಗಡಿಯ ಸಮೀಪ ಇರಾನ್‌ನ ನೌಕೆ 'ಐರೀಸ್ ಡೇನಾ'ದ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 84 ಮಂದಿ ಮೃತಪಟ್ಟಿದ್ದರು. ಬದುಕುಳಿದಿದ್ದ 32 ಜನರನ್ನು ಶ್ರೀಲಂಕಾ ರಕ್ಷಿಸಿತ್ತು.
ಇದಾದ ಬೆನ್ನಲ್ಲೇ ಇರಾನ್‌ನ ಇನ್ನೊಂದು ನೌಕೆ 'ಐರೀಸ್ ಬುಶೆಹ್ರ್'ನ ಎಂಜಿನ್ ವೈಫಲ್ಯಗೊಂಡ ಕಾರಣ ಅದರಲ್ಲಿದ್ದ 200ಕ್ಕೂ ಅಧಿಕ ಮಂದಿಯೂ ಶ್ರೀಲಂಕಾದಲ್ಲಿ ತಂಗಿದ್ದರು.

