ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ತೆರೆ ಎಳೆಯುವ ಪ್ರಯತ್ನಗಳ ಭಾಗವಾಗಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ನೇತೃತ್ವದ ಪಾಕಿಸ್ತಾನದ ನಿಯೋಗವು ಬುಧವಾರ ಟೆಹರಾನ್ ತಲುಪಿದೆ.
ಮುನೀರ್ ಅವರು ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರನ್ನು ಒಳಗೊಂಡ ನಿಯೋಗದ ಭಾಗವಾಗಿದ್ದಾರೆ ಎಂದು ಪಾಕ್ ಮಿಲಿಟರಿಯ ಮಾಧ್ಯಮ ವಿಭಾಗವಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯಸ್ಥಿಕೆ ಪ್ರಯತ್ನಗಳ ಭಾಗವಾಗಿ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಮತ್ತು ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರನ್ನು ಒಳಗೊಂಡ ನಿಯೋಗ ಇರಾನ್ ತಲುಪಿದೆ ಎಂದು ಅದು ಹೇಳಿದೆ.
ಟೆಹರಾನ್‌ಗೆ ಆಗಮಿಸಿದ ನಿಯೋಗದ ಸದಸ್ಯರನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸ್ವಾಗತಿಸಿದರು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಸೌದಿ ಅರೇಬಿಯಾ, ಕತಾರ್ ಮತ್ತು ತುರ್ಕಿಯೆಗೆ ಅಧಿಕೃತ ಭೇಟಿ ಕೈಗೊಂಡ ಬೆನ್ನಲ್ಲೇ ಈ ಭೇಟಿ ನಡೆದಿದೆ.
ಮುಂದಿನ ಸುತ್ತಿನ ಮಾತುಕತೆಗೆ ಮುಂಚಿತವಾಗಿ ಅಗತ್ಯ ಆಡಳಿತಾತ್ಮಕ ಮತ್ತು ಭದ್ರತಾ ವ್ಯವಸ್ಥೆಗಳನ್ನು ಮಾಡಲು ಪಾಕಿಸ್ತಾನದ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಮುಂದಿನ ಎರಡು ದಿನಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವಿನ ಮೊದಲ ಸುತ್ತಿನ ಮಾತುಕತೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿತ್ತು.

