HEALTH TIPS

ಇರಾನ್‌ ಮೇಲೆ ಅಮೆರಿಕ-ಇಸ್ರೇಲ್‌ ವೈಮಾನಿಕ ದಾಳಿ: 25 ಮಂದಿ ಸಾವು

 ದುಬೈ/ಜೆರುಸಲೇಂ: ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ಸರಣಿ ದಾಳಿಗಳನ್ನು ನಡೆಸಿದ್ದು, 25ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.


ಟೆಹರಾನ್‌ನಲ್ಲಿ ಮೂವರು, ಎಸ್ಲಾಮ್‌ಶಾರ್‌ ಬಳಿ 15 ಮಂದಿ, ಕೋಮ್‌ ನಗರದ ವಸತಿ ಪ್ರದೇಶದಲ್ಲಿ ಐವರು ಮೃತಪಟ್ಟಿದ್ದಾರೆ. ಇತರ ನಗರಗಳ ಮೇಲೆ ನಡೆದ ದಾಳಿಯಲ್ಲಿ ಆರು ಮಂದಿ ಅಸುನೀಗಿದ್ದಾರೆ.

ಟೆಹರಾನ್‌ನ ಶರೀಫ್‌ ತಾಂತ್ರಿಕ ವಿಶ್ವವಿದ್ಯಾಲಯವನ್ನು ಗುರಿಯಾಗಿಸಿಕೊಂಡು ಸೋಮವಾರ ಬೆಳಿಗ್ಗೆ ವೈಮಾನಿಕ ದಾಳಿ ನಡೆಸಲಾಗಿದೆ. ವಿ.ವಿ.ಯ ಕಟ್ಟಡಗಳಿಗೆ ಮತ್ತು ಕ್ಯಾಂಪಸ್‌ನ ಪಕ್ಕದಲ್ಲಿರುವ ನೈಸರ್ಗಿಕ ಅನಿಲ ವಿತರಣಾ ಕೇಂದ್ರಕ್ಕೆ ಹಾನಿಯಾಗಿದೆ.

ಯುದ್ಧ ಆರಂಭವಾದ ಬಳಿಕ, ದೇಶದ ಎಲ್ಲ ಶಾಲೆ-ಕಾಲೇಜುಗಳು ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿವೆ. ಹೀಗಿರುವಾಗ, ವಿದ್ಯಾರ್ಥಿಗಳಿಲ್ಲದೆ ಖಾಲಿ ಇರುವ ವಿಶ್ವವಿದ್ಯಾಲಯದ ಆವರಣದಲ್ಲಿ ಏನನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.

ಈ ವಿಶ್ವವಿದ್ಯಾಲಯವು ಸೇನೆಯೊಂದಿಗೆ, ಅದರಲ್ಲೂ ವಿಶೇಷವಾಗಿ ರೆವಲ್ಯೂಷನರಿ ಗಾರ್ಡ್‌ನ ನಿಯಂತ್ರಣದಲ್ಲಿರುವ ಬ್ಯಾಲಿಸ್ಟಿಕ್‌ ಕ್ಷಿಪಣಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವುದಕ್ಕಾಗಿ, ಹಲವು ದೇಶಗಳು ಕಳೆದ ಕೆಲವು ವರ್ಷಗಳಿಂದ ಅದರ ಮೇಲೆ ನಿರ್ಬಂಧಗಳನ್ನು ಹೇರಿವೆ.

ಇಸ್ರೇಲ್‌ ಹಾಗೂ ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್‌ ಸಹ ಇಸ್ರೇಲ್ ಮತ್ತು ಅದರ ಕೊಲ್ಲಿ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಇರಾನ್‌ನ ಕ್ಷಿಪಣಿಗಳು ಉತ್ತರ ಇಸ್ರೇಲ್‌ನ ಹೈಫಾ ನಗರದ ಮೇಲೆ ಅಪ್ಪಳಿಸಿದ್ದು, ಅಲ್ಲಿ ವಸತಿ ಕಟ್ಟಡದ ಅವಶೇಷಗಳಲ್ಲಿ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ.

ಇರಾನ್‌ ನಡೆಸಿದ ಕ್ಷಿಪಣಿಗಳು ಮತ್ತು ಡ್ರೋನ್‌ ದಾಳಿಯನ್ನು ಕುವೈತ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಸೌದಿ ಅರೇಬಿಯಾ ದೇಶಗಳ ವಾಯು ರಕ್ಷಣಾ ವ್ಯವಸ್ಥೆಗಳು ನಿಷ್ಕ್ರಿಯಗೊಳಿಸಿವೆ.

'ರಾಜತಾಂತ್ರಿಕ ಮಾತುಕತೆಗೆ ಅವಕಾಶ ಕೊಡಿ'

'ನಾಗರಿಕ ಮೂಲಸೌಕರ್ಯ, ಅದರಲ್ಲೂ ವಿಶೇಷವಾಗಿ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದು ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ. ಹೀಗಾಗಿ, ರಾಜತಾಂತ್ರಿಕ ಮಾತುಕತೆಗೆ ಅವಕಾಶ ನೀಡಬೇಕು' ಎಂದು ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಕರೆ ನೀಡಿದ್ದಾರೆ.

'ಸಂಘರ್ಷದ ತೀವ್ರತೆಯು ಕದನ ವಿರಾಮ ಅಥವಾ ಶಾಂತಿಯನ್ನು ತರುವುದಿಲ್ಲ. ಮಾತುಕತೆಗಳಿಂದ ಮಾತ್ರ ಇದು ಸಾಧ್ಯ. ಪ್ರಮುಖವಾಗಿ ಪ್ರಾದೇಶಿಕ ಪಾಲುದಾರರು ನಡೆಸುತ್ತಿರುವ ಈಗಿನ ಪ್ರಯತ್ನಗಳಿಂದ ಮಾತ್ರ ಶಾಂತಿ ಲಭಿಸಲು ಸಾಧ್ಯ' ಎಂದು ಹೇಳಿದ್ದಾರೆ.

ಈವರೆಗೆ 1,900 ಮಂದಿ ಸಾವು

ಯುದ್ಧ ಪ್ರಾರಂಭವಾದ ಬಳಿಕ ಈವರೆಗೆ ಇರಾನ್‌ನಲ್ಲಿ 1,900ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಲೆಬನಾನ್‌ನಲ್ಲಿ 1,400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.

ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ನಡೆಸಿದ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ ಇಸ್ರೇಲ್‌ನ 11 ಯೋಧರು ಮೃತಪಟ್ಟಿದ್ದಾರೆ.

ಕೊಲ್ಲಿ ಅರಬ್‌ ರಾಷ್ಟ್ರಗಳು ಮತ್ತು ಇಸ್ರೇಲ್‌ ಆಕ್ರಮಿತ ವೆಸ್ಟ್‌ಬ್ಯಾಂಕ್‌ನಲ್ಲಿ 24, ಇಸ್ರೇಲ್‌ನಲ್ಲಿ 23 ಜನರು ಮೃತಪಟ್ಟಿದ್ದಾರೆ. ಅಮೆರಿಕದ 13 ಮಂದಿ ಹತರಾಗಿದ್ದಾರೆ.

ಬೇಟೆ ನಿಲ್ಲುವುದಿಲ್ಲ: ಇಸ್ರೇಲ್‌

'ಇರಾನ್‌ನ ಉಕ್ಕು ಮತ್ತು ಪೆಟ್ರೋಕೆಮಿಕಲ್‌ ಕೈಗಾರಿಕೆಗಳನ್ನು ತೀವ್ರವಾಗಿ ಹಾನಿಗೊಳಿಸಲಾಗಿದೆ. ಅದರ ಮೂಲಸೌಕರ್ಯ ನಾಶಗೊಳಿಸುವುದನ್ನು ಮುಂದುವರಿಸುತ್ತೇವೆ. ಇದು ಭಯೋತ್ಪಾದಕ ಆಡಳಿತದ ಅವನತಿ ಮತ್ತು ಪತನಕ್ಕೆ ಕಾರಣವಾಗುತ್ತದೆ. ಇಸ್ರೇಲ್‌ ಮೇಲೆ ದಾಳಿ ಮಾಡುವ ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸುವ ಅವರ ಸಾಮರ್ಥ್ಯವನ್ನು ಕುಂದಿಸುತ್ತದೆ' ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್‌ ಕಾಟ್ಜ್‌ ಹೇಳಿದ್ದಾರೆ. ಇಸ್ರೇಲ್‌ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಇಯಾಲ್‌ ಜಮೀರ್‌ ಮತ್ತು ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಯುದ್ಧ ಪರಿಸ್ಥಿತಿಯ ಮೌಲ್ಯಮಾಪನ ಕುರಿತು ಸಭೆ ನಡೆಸಿದ ಕಾಟ್ಜ್‌ 'ರೆವಲ್ಯೂಷನರಿ ಗಾರ್ಡ್‌ನವರು ನಾಗರಿಕರ ಮೇಲೆ ಗುಂಡು ಹಾರಿಸುತ್ತಿದ್ದಾರೆ. ನಾವು ಭಯೋತ್ಪಾದಕರ ನಾಯಕರನ್ನು ನಿರ್ಮೂಲನೆ ಮಾಡುತ್ತಿದ್ದೇವೆ' ಎಂದು ಹೇಳಿದ್ದಾರೆ. 'ಇರಾನ್‌ ನಾಯಕರು ತಾವು ಗುರಿಯಾಗಿದ್ದೇವೆ ಎಂಬ ಭೀತಿಯಲ್ಲೇ ಬದುಕುತ್ತಿದ್ದಾರೆ. ನಾವು ಅವರನ್ನು ಒಬ್ಬೊಬ್ಬರನ್ನಾಗಿ ಬೇಟೆಯಾಡುವುದನ್ನು ಮುಂದುವರಿಸುತ್ತೇವೆ' ಎಂದು ತಿಳಿಸಿದ್ದಾರೆ.

ಅಮೆರಿಕ-ಇಸ್ರೇಲ್‌ ದಾಳಿಯಿಂದ ಈವರೆಗೆ ಮೃತಪಟ್ಟ ಇರಾನ್‌ನ ನಾಯಕರು ಅಧಿಕಾರಿಗಳು

* ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ


* ಭದ್ರತಾ ಮುಖ್ಯಸ್ಥ ಅಲಿ ಲಾರೀಜಾನಿ‌


* ಇರಾನ್‌ನ ಗುಪ್ತಚರ ಇಲಾಖೆ ಸಚಿವ ಇಸ್ಮಾಯಿಲ್‌ ಖತೀಬ್‌


* ಆಯತೊಲ್ಲಾ ಖಮೇನಿ ಅವರ ಆಪ್ತ ಸಲಹೆಗಾರ ಅಲಿ ಶಮ್ಖಾನಿ


* ಐಆರ್‌ಜಿಸಿ ಮುಖ್ಯ ಕಮಾಂಡರ್‌ ಮೊಹಮ್ಮದ್‌ ಪಾಕ್ಪೂರ್‌


* ಇರಾನ್‌ ರಕ್ಷಣಾ ಸಚಿವ ಅಜೀಜ್‌ ನಾಸಿರ್ಜಾದೆ


* ಇರಾನ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್‌ರಹೀಂ ಮೌಸಾವಿ


* ಅರೆಸೇನಾ ಪಡೆ ಬಸೀಜ್‌ನ ಕಮಾಂಡರ್‌ ಗುಲಾಮ್‌ ರೆಜಾ ಸುಲೈಮಾನಿ


* ಇರಾನ್‌ ರೆವಲ್ಯೂಷನರಿ ಗಾರ್ಡ್‌ನ ನೌಕಾಪಡೆಯ ಗುಪ್ತಚರ ಮುಖ್ಯಸ್ಥ ಬೆಹ್ನಂ ರೆಜಾಯಿ


* ರೆವಲ್ಯೂಷನರಿಯ ನೌಕಾಪಡೆಯ ಮುಖ್ಯಸ್ಥ ಅಲಿರೇಜಾ ತಂಕಸೀರಿ


* ಐಆರ್‌ಜಿಸಿ ಗುಪ್ತಚರ ವಿಭಾಗದ ಮುಖ್ಯಸ್ಥ ಮಜೀದ್‌ ಖಾದೆಮಿ






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries