ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಈಟಥಿ91 ವಿಮಾನವು ಹವಾಮಾನ ವೈಪರಿತ್ಯದಿಂದಾಗಿ 3 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಟ ನಡೆಸಿದ್ದು ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿತು. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ (ಏ.19) ಮಧ್ಯಾಹ್ನ 3.30ರ ಸುಮಾರಿಗೆ 22 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ Fly91 ವಿಮಾನವು ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ನಿಲ್ದಾಣದಿಂದ ಹೊರಟ್ಟಿತ್ತು. ಸಂಜೆ 4.30ಕ್ಕೆ ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಹವಾಮಾನ ವೈಪರಿತ್ಯದಿಂದ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ವಿಮಾನದಲ್ಲಿ ಕಣ್ಣೀರು ಸುರಿಸುತ್ತಾ, ದೇವರಿಗೆ ಕೈಮುಗಿದು ಬೇಡಿಕೊಂಡಿದ್ದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಅಧಿಕಾರಿಯ ಪ್ರಕಾರ, 'ಹವಾಮಾನ ವೈಪರಿತ್ಯದಿಂದ ವಿಮಾನವು ಸುಮಾರು ಒಂದು ಗಂಟೆ ಹುಬ್ಬಳ್ಳಿಯ ಮೇಲೆಯೇ ಹಾರಾಡಿ ನಂತರ ಬೇರೆಡೆಗೆ ತಿರುಗಿಸಲಾಯಿತು. ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ವಿಮಾನಗಳನ್ನು ಲ್ಯಾಂಡ್ ಮಾಡುವ ಬದಲು ಹಾರಾಟ ಮುಂದುವರಿಸುತ್ತವೆ. ಇದು ಪೈಲಟ್‌ಗಳ ನಿರ್ಧಾರವಾಗಿರುತ್ತದೆ. ಬಳಿಕ ವಿಮಾನವು ಸಂಜೆ 6.30ರ ಸುಮಾರಿಗೆ ಬೆಂಗಳೂರಿನಲ್ಲಿ ಇಳಿದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರ ರಾತ್ರಿ 11 ಗಂಟೆ ಸುಮಾರಿಗೆ ಹುಬ್ಬಳ್ಳಿಗೆ ಹಿಂತಿರುಗಿತು' ಎಂದು ಅಧಿಕಾರಿ ಹೇಳಿದರು.
ಅಲ್ಲದೇ ಈ ಹಿಂದೆಯೂ ಇದೇ ರೀತಿಯ ಅಡಚಣೆಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದರು. 'ಹವಾಮಾನ ವೈಪರೀತ್ಯದಿಂದಾಗಿ ಮುಂಬೈನಿಂದ ಕೊಲ್ಹಾಪುರಕ್ಕೆ ಹೋಗುತ್ತಿದ್ದ ಮತ್ತೊಂದು ವಿಮಾನವನ್ನು ಗೋವಾಕ್ಕೆ ತಿರುಗಿಸಲಾಗಿದೆ. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ಸಮಸ್ಯೆಯಾಗಿಲ್ಲ' ಎಂದು ಅಧಿಕಾರಿ ತಿಳಿಸಿದರು.

