ಝಾನ್ಸಿ: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ದಾನ, ಆಪಾದಿತರಿಗೆ ಶಿಕ್ಷೆ ಪ್ರಕಟಿಸಿಸುವುದು ತುಂಬಾ ವಿಳಂಬ ಎಂಬ ಹಲವರ ಆರೋಪಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ.
'ಚರಸ್' ಎಂಬ ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ವ್ಯಕ್ತಿಯೊಬ್ಬನಿಗೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲಾ ನ್ಯಾಯಾಲಯ ಬರೋಬ್ಬರಿ 18 ವರ್ಷಗಳ ವಿಚಾರಣೆ ಬಳಿಕ ಶಿಕ್ಷೆ ಹಾಗೂ ದಂಡ ಪ್ರಕಟಿಸಿದೆ.
ಕಾನ್ಪುರ ನಗರ ವ್ಯಾಪ್ತಿಯ ಕಲ್ಯಾಣಪುರ ಮೂಲದ ಸಂಜಯ್ ಸಿಂಗ್ ಎಂಬಾತ 2008 ರಲ್ಲಿ ಝಾನ್ಸಿಯ ಮಹಾವೀರನ್ ಬಳಿ 300 ಗ್ರಾಂ ಚರಸ್ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜೈಲು ಸೇರಿದ್ದ.
ಝಾನ್ಸಿ ಜಿಲ್ಲೆಯ ಪ್ರೇಮನಗರ ಪೊಲೀಸ್ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.
2008ರಿಂದಲೂ ಕೋರ್ಟ್‌ನಲ್ಲಿ ವಿಚಾರಣೆ ನಡೆದ ಈ ಪ್ರಕಣದಲ್ಲಿ ಬುಧವಾರ (ಏಪ್ರಿಲ್ 22) ಝಾನ್ಸಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶ ಶರದ್ ಚೌಧರಿ ಅವರು ಅಪರಾಧಿ ಸಂಜಯ್ ಸಿಂಗ್‌ಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ ಎಂದು ಪ್ರೇಮನಗರ ಪೊಲೀಸ್ ಠಾಣೆಯ ಮುಖ್ಯಸ್ಥ ಬಲ್ಬೀರ್ ಸಿಂಗ್ ಗೌರ್ ತಿಳಿಸಿದ್ದಾರೆ.

