ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಮತದಾನ ಶಾಂತಯುತವಾಗಿದ್ದರೂ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ.
ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಕುಮಾರ್‌ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂಧು ಸರ್ಕಾರ್ ಅವರ ಮೇಲೆ ಸ್ಥಳೀಯರು ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.
ಮತದಾನದ ವೇಳೆ ಕ್ಷೇತ್ರದ ವ್ಯಾಪ್ತಿಯ ಹಳ್ಳಿಯೊಂದಕ್ಕೆ ಸುವೇಂಧು ಅವರು ತೆರಳಿದ್ದರು. ಅವರಿಗೆ ಒಬ್ಬ ಗನ್‌ಮ್ಯಾನ್ ಭದ್ರತೆ ಮಾತ್ರ ಇತ್ತು.
ಸಾರ್ವಜನಿಕರೊಂದಿಗೆ ಮಾತಿನ ವೇಳೆ ಘರ್ಷಣೆ ಉಂಟಾಗಿ ಸುವೇಂಧು ಅವರ ಮೇಲೆ ಸ್ಥಳೀಯರು ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಬೆದರಿದ ಬಿಜೆಪಿ ಅಭ್ಯರ್ಥಿ ದಿಕ್ಕಾಪಾಲಗಿ ಓಡಿದ್ದಾರೆ. ರಕ್ಷಣೆಗೆ ಮೊರೆ ಇಟ್ಟಿದ್ದಾರೆ.
ಆದರೆ, ಒಬ್ಬ ಗನ್ ಮ್ಯಾನ್ ಸಹ ಅಸಹಾಯಕನಾಗಿದ್ದ. ಇದರಿಂದ ಸಿಕ್ಕ ಸಿಕ್ಕವರು ಸುವೇಂಧುಗೆ ಥಳಿಸಿದ್ದಾರೆ. ಕಡೆಗೆ ದೂರದಲ್ಲಿದ್ದ ಭದ್ರತಾ ಸಿಬ್ಬಂದಿ ಬಂದು ಸ್ಥಳೀಯರನ್ನು ಓಡಿಸಿದ್ದಾರೆ. ಈ ಕುರಿತು ಹಲವರ ಮೇಲೆ ಕುಮಾರ್‌ಗಂಜ್‌ನಲ್ಲಿ ಪ್ರಕರಣ ದಾಖಲಾಗಿದೆ.
ಟಿಎಂಸಿ ಕಾರ್ಯಕರ್ತರು ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಸುವೇಂಧು ಸರ್ಕಾರ್ ಆರೋಪಿಸಿದ್ದಾರೆ.

