ನವದೆಹಲಿ: ಎನ್‌ಸಿಪಿ ನಾಯಕ ರಾಮಾವತಾರ್ ಜಗ್ಗಿ ಹತ್ಯೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಮಗ ಅಮಿತ್ ಜೋಗಿ ಅವರಿಗೆ ಚಂಡೀಗಢ ಹೈಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ಹೈಕೋರ್ಟ್ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಜೋಗಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಂ ನಾಥ, ಸಂದೀಪ್ ಮೆಹ್ತಾ ಮತ್ತು ವಿಜಯ್ ಬಿಷ್ಣೋಯಿ ಅವರ ಪೀಠ ನಡೆಸಿತು.
ಜೋಗಿ ಅವರ ಅರ್ಜಿಯ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಪೀಠವು ಸಿಬಿಐಗೆ ನೋಟಿಸ್ ನೀಡಿದೆ.
ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಚಂಡೀಗಢ ಹೈಕೋರ್ಟ್ ಜೋಗಿ ಅವರಿಗೆ ಸೂಚಿಸಿತ್ತು.
ಸಿಬಿಐ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದಂತೆ, ಹೈಕೋರ್ಟ್ ಈ ಕೊಲೆ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸಿತ್ತು. ಆರಂಭದಲ್ಲಿ ರಾಜ್ಯ ಪೊಲೀಸರು ತನಿಖೆ ನಡೆಸಿದ್ದ ಈ ಪ್ರಕರಣವನ್ನು ನಂತರ ಸಿಬಿಐಗೆ ವರ್ಗಾಯಿಸಲಾಯಿತು. ಸಿಬಿಐ ಅಮಿತ್ ಜೋಗಿ ಸೇರಿದಂತೆ ಹಲವಾರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.
ಅಜಿತ್ ಜೋಗಿ ಅವರು ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ಅಂದರೆ ಜೂನ್ 4, 2003 ರಂದು ರಾಮಾವತಾರ್ ಜಗ್ಗಿ ಅವರ ಕೊಲೆ ನಡೆದಿತ್ತು.
ಅಜಿತ್ ಜೋಗಿ ತಮ್ಮ ತಂದೆ ಸ್ಥಾಪಿಸಿದ್ದ ಜನತಾ ಕಾಂಗ್ರೆಸ್ ಛತ್ತೀಸ್‌ಗಢ (ಜೆ) ಪಕ್ಷದ ಅಧ್ಯಕ್ಷರಾಗಿದ್ದಾರೆ.

