ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ಹಾಗೂ ಇಸ್ಲಾಮಾಬಾದ್ ನಲ್ಲಿ ಸುಮಾರು 21 ಗಂಟೆಗಳ ಕಾಲ ನಡೆದ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡ ಬಳಿಕ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸುಮಾರು 40 ನಿಮಿಷಗಳ ಕಾಲ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಳಿಕ ಇಬ್ಬರು ನಾಯಕರ ನಡುವಿನ ಮೊದಲ ಸಂಭಾಷಣೆ ಇದಾಗಿದೆ.
ಮಾತುಕತೆಯ ವಿವರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, "ನನ್ನ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಸ್ವೀಕರಿಸಿದೆ. ವಿವಿಧ ಕ್ಷೇತ್ರಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಿರುವ ಮಹತ್ವದ ಪ್ರಗತಿಯ ಕುರಿತು ಮಾತನಾಡಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ" ಎಂದು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯನ್ನೂ ಈ ವೇಳೆ ಇಬ್ಬರು ನಾಯಕರು ಚರ್ಚಿಸಿದ್ದು, ಹಾರ್ಮುಝ್ ಜಲಸಂಧಿಯನ್ನು ಮುಕ್ತ ಹಾಗೂ ಸುರಕ್ಷಿತವಾಗಿರಿಸುವ ಅಗತ್ಯವನ್ನು ಒತ್ತಿಹೇಳಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಮಧ್ಯಪ್ರಾಚ್ಯದ ರಾಜಕೀಯ ಉದ್ವಿಗ್ನತೆ ಉನ್ನತ ಮಟ್ಟದಲ್ಲಿರುವ ಸಂದರ್ಭದಲ್ಲಿ ಈ ಮಾತುಕತೆ ನಡೆದಿದ್ದು, ಎರಡೂ ದೇಶಗಳು ಅಲ್ಲಿನ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿವೆ.
ಈ ನಡುವೆ, ಭಾರತಕ್ಕೆ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಭಾರತ-ಅಮೆರಿಕ ಸಂಬಂಧಗಳು ಬಲಿಷ್ಠ ನೆಲೆಯಲ್ಲಿವೆ ಎಂದು ಹೇಳಿದ್ದಾರೆ. "ಮುಂದಿನ ಕೆಲವು ದಿನಗಳು ಮತ್ತು ವಾರಗಳಲ್ಲಿ ಇಂಧನ ಸೇರಿದಂತೆ ಹಲವು ಪ್ರಮುಖ ಒಪ್ಪಂದಗಳು ನಡೆಯುವ ನಿರೀಕ್ಷೆಯಿದೆ. ಆರ್ಥಿಕ ಸಹಕಾರ ಮತ್ತಷ್ಟು ಗಾಢವಾಗಬಹುದು" ಎಂದು ಅವರು ತಿಳಿಸಿದ್ದಾರೆ.
ಮಾತುಕತೆಯ ಕುರಿತು ವಿವರ ನೀಡಿದ ಗೋರ್, "ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ ಎಂದು ನಿಮಗೆ ತಿಳಿಸಬೇಕೆಂದು ನಾನು ಬಯಸುತ್ತೇನೆ" ಎಂದು ಟ್ರಂಪ್ ಮೋದಿಗೆ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇನ್ನೊಂದೆಡೆ, ದುರ್ಬಲವಾದ ಕದನ ವಿರಾಮದ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.
ಪ್ರಧಾನಿ ಮೋದಿ ಮತ್ತು ಟ್ರಂಪ್ ಈ ಹಿಂದೆ ಫೆಬ್ರವರಿ 2ರಂದು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಪ್ರಗತಿಯನ್ನು ಪರಿಶೀಲಿಸಲು ಹಾಗೂ ಮಾರ್ಚ್ 24ರಂದು ಪ್ರಾದೇಶಿಕ ಪರಿಸ್ಥಿತಿಗಳ ಕುರಿತು ಚರ್ಚಿಸಲು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು.
ಮಂಗಳವಾರದ ಸಂಭಾಷಣೆಯ ಸಂಪೂರ್ಣ ವಿವರಗಳನ್ನು ತಕ್ಷಣ ಬಹಿರಂಗಪಡಿಸದಿದ್ದರೂ, ಸುಮಾರು 40 ನಿಮಿಷಗಳ ಅವಧಿಯ ಈ ಮಾತುಕತೆ ಇಬ್ಬರು ನಾಯಕರ ನಡುವೆ ಮಹತ್ವದ ವಿಚಾರ ವಿನಿಮಯ ನಡೆದಿರುವುದನ್ನು ಸೂಚಿಸುತ್ತದೆ.

