ಮುಂಬೈ: ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಪದಕ ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು, ಪೈಲ್ವಾನ್ ಕಶೋಬಾ ದಾದಾಸಾಹೇಬ್ ಜಾಧವ್ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪುರಸ್ಕಾರ ನೀಡುವ ಸಂಬಂಧ ಮೇ 4ರ ಒಳಗೆ ನಿರ್ಧರಿಸುವಂತೆ ಬಾಂಬೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಹೈಕೋರ್ಟ್ನ ಕೊಲ್ಹಾಪುರ ಪೀಠದ ನ್ಯಾಯಮೂರ್ತಿಗಳಾದ ಮಾಧವ ಜಮದಾರ ಮತ್ತು ಪ್ರವೀಣ್ ಪಾಟೀಲ್ ಅವರು ಏಪ್ರಿಲ್ 15ರಂದು ಆದೇಶ ಹೊರಡಿಸಿದ್ದು, ಜಾಧವ್ ಅವರು ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬುದರಲ್ಲಿ ವಿವಾದವಿಲ್ಲ ಎಂದು ಹೇಳಿದ್ದಾರೆ.
ಕಶೋಬಾ ಅವರ ಪುತ್ರ ರಣಜೀತ್ ಯಾದವ್ ಸ್ಥಾಪಿಸಿರುವ 'ಕುಸ್ತಿವೀರ ಕಶೋಬಾ ಜಾಧವ್ ಪ್ರತಿಷ್ಠಾನ' ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಮುಂದಿನ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಲಾಗಿದೆ.

