ನವದೆಹಲಿ: 50 ದಿನ ಜೈಲಿನಲ್ಲಿ, 25 ದಿನ ಹೋಟೆಲ್‌ನಲ್ಲಿ, 19 ಗಂಟೆ ಬಸ್‌ನಲ್ಲಿ ಪ್ರಯಾಣ ಬೆಳೆಸಿ ಇರಾನ್‌ನಿಂದ ಭಾರತಕ್ಕೆ ಮರಳಿ ಬಂದವನ ನೋವಿನ ಕಥೆ ಇದು. ದೆಹಲಿಯ ಉಪನಗರವಾದ ಗಾಜಿಯಾಬಾದ್‌ಗೆ ಮರಳಿರುವ ಕೇತನ್ ಮೆಹ್ತಾ ಸಂದರ್ಶನವೊಂದರಲ್ಲಿ ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.
ಕೇತನ್ ಮೆಹ್ತಾ ಅವರನ್ನು 50 ದಿನಗಳ ಕಾಲ ಇರಾನಿನ ಜೈಲಿನಲ್ಲಿ ಇರಿಸಲಾಯಿತು. ಅದರ ಕೊನೆಯಲ್ಲಿ ಫೆ. 27ರಂದು ಅವರನ್ನು ಹೋಟೆಲ್‌ಗೆ ಸ್ಥಳಾಂತರಿಸಲಾಯಿತು. ಇನ್ನೇನು ಮರುದಿನ ಭಾರತಕ್ಕೆ ವಾಪಸ್ ಆಗಬೇಕಿತ್ತು. ಅಷ್ಟರಲ್ಲಿಯೇ ಫೆ.28ರಂದು ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಇರಾನ್ ವಿರುದ್ಧ ಜಂಟಿ ದಾಳಿಗಳನ್ನು ನಡೆಸಿದ್ದವು. ಅಲ್ಲಿಂದ ಕೇತನ್ ಮೆಹ್ತಾ ಅವರ ಪರಿಸ್ಥಿತಿ ತ್ವರಿತವಾಗಿ ಬದಲಾಗುತ್ತಾ ಹೋಯಿತು. ಎಲ್ಲಾ ಮುಗಿಯಿತು, ಇನ್ನೇನು ಮನೆಗೆ ಮರಳಬೇಕು ಎನ್ನುವಷ್ಟರಲ್ಲಿ ಇನ್ನೂ 25 ದಿನಗಳ ಕಾಲ ಜೈಲಿನಲ್ಲಿಯೇ ಕಾಲ ಕಳೆದರು.
'ನಮ್ಮದೊಂದು ತಂಡವಿತ್ತು. ಅವರ ಜೊತೆಗೆ ನಾನು ಜೈಲಿನಿಂದ ಹೊರಟು ಹೋಟೆಲ್‌ನಲ್ಲಿ ನೆಲೆಸಿದ್ದೆ. ಆಗ ಯುದ್ಧ ಸನ್ನಿಹಿತವಾಗಿದೆ ಎಂದು ನಮಗೆ ಗೊತ್ತಿರಲಿಲ್ಲ. ಮರುದಿನವೇ ಯುದ್ಧ ಪ್ರಾರಂಭವಾಯಿತು. ನಾವು ಸಂಪೂರ್ಣವಾಗಿ ದಿಗ್ಭ್ರಮೆಗೊಂಡೆವು. ಅಲ್ಲಿ ಅಂಗಡಿ, ಮನೆ ಸೇರಿದಂತೆ ಎಲ್ಲವೂ ಮುಚ್ಚಲ್ಪಟ್ಟವು. ವಿಮಾನ ಹಾರಾಟವು ಸ್ಥಗಿತಗೊಂಡಿತು. ನಮ್ಮ ಹೋಟೆಲ್ ನಗರವಾದ ಬಂದರ್ ಅಬ್ಬಾಸ್ ನಗರದಿಂದ ಕೇವಲ 600-700 ಮೀಟರ್ ದೂರದಲ್ಲಿತ್ತು. ಯುದ್ಧ ಆರಂಭದಿಂದಲೂ ಇರಾನ್ ನೌಕಾಪಡೆಯ ಪ್ರಮುಖ ನೆಲೆ ಇದಾಗಿದ್ದು, ಈ ನೆಲೆಯನ್ನು ದಾಳಿಕೋರರು ಸಂಪೂರ್ಣವಾಗಿ ಗುರಿಯಾಗಿಸಿಕೊಂಡಿದ್ದರು' ಎಂದು ಹೇಳಿದ್ದಾರೆ.
'ಬಳಿಕ ನಾವು ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆವು. ಆ ಪ್ರದೇಶದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಹೋಟೆಲ್‌ನಿಂದ ಯಾರೊಬ್ಬರೂ ಹೊರಗೆ ಬರಬಾರದೆಂದು ಸೂಚನೆ ನೀಡಿದರು. ದಿನದಿಂದ ದಿನಕ್ಕೆ ಬಾಂಬ್‌ಗಳು ಮತ್ತು ಕ್ಷಿಪಣಿಗಳ ಶಬ್ದಗಳು ಪ್ರಾರಂಭಿಸಿದವು. ನಾವು ಹೋಟೆಲ್‌ನ ಕಿಟಕಿಗಳನ್ನು ತೆರೆದು ಹೊರಗೆ ನೋಡುತ್ತಿದ್ದೆವು. ಆದರೆ ನಮ್ಮ ಕಣ್ಣ ಮುಂದೆಯೇ ಕ್ಷಿಪಣಿ ಮಳೆ ಸುರಿಸುವುದನ್ನು ನೋಡುತ್ತಿದ್ದೆವು' ಎಂದರು.
ಮುಂದುವರೆದು ಮಾತನಾಡಿದ ಕೇತನ್ ಮೆಹ್ತಾ ಅವರು, 'ನಾವು ಮನೆಗೆ ಹಿಂದಿರುಗುವ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ದಾರಿಯುದ್ದಕ್ಕೂ ಬಾಂಬ್‌ಗಳು ಬಿದ್ದಿದ್ದವು. ಬಂದರ್ ಅಬ್ಬಾಸ್‌ನಿಂದ ಬಸ್‌ನಲ್ಲಿ ಸುಮಾರು 1,800 ಕಿಲೋಮೀಟರ್ ಪ್ರಯಾಣ ಮಾಡಿದ ನಂತರ ಅರ್ಮೇನಿಯಾ ತಲುಪಿದೆವು. ಅಲ್ಲಿಂದ ಆಚೆಗೆ ಬರಲು ಸುಮಾರು 18-19 ಗಂಟೆಗಳು ಬೇಕಾಯಿತು. ನಮ್ಮ ಈ ಪ್ರಯಾಣದ ಉದ್ದಕ್ಕೂ ಕೇವಲ ಸ್ಫೋಟಗಳ ಶಬ್ದಗಳು ನಿರಂತರವಾಗಿ ಕೇಳಿಬರುತ್ತಿದ್ದವು. ಬಸ್ ತೀವ್ರವಾಗಿ ಅಲುಗಾಡುತ್ತಿತ್ತು. ಈ ಭಯದ ವಾತಾವರಣದ ನಡುವೆ, ನಾವು ಹೇಗೋ ಅರ್ಮೇನಿಯನ್ ಗಡಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೆವು. ಇದರ ಕಠಿಣ ಪರಿಸ್ಥಿತಿಯ ನಡುವೆ ಸಮಾಧಾನಕರ ಅಂಶವೆಂದರೆ, ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು' ಎಂದು ತಮ್ಮ ನೋವಿನ ಕಥೆಯನ್ನು ವಿವರಿಸಿದ್ದಾರೆ.

