ರಾಯಪುರ: ಬಸ್ತರ್‌ನಲ್ಲಿ ಸಶಸ್ತ್ರ ನಕ್ಸಲ್‌ವಾದ ಕೊನೆಗೊಂಡಿದೆ. ಇನ್ನು ಅಭಿವೃದ್ಧಿಯತ್ತ ಚಿತ್ತ ಹರಿಸಲಾಗುವುದು ಎಂದು ಛತ್ತೀಸಗಢದ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ಹೇಳಿದ್ದಾರೆ.
ಬುಡಕಟ್ಟು ಸಂಸ್ಕೃತಿಯನ್ನು ಸಂರಕ್ಷಿಸುವ ಜೊತೆಗೆ ಯುವ ಸಮೂಹಕ್ಕೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವ ಮೂಲಕ ರಾಜ್ಯ ಸರ್ಕಾರವು ಬಸ್ತರ್ ವಲಯದ ಅಭಿವೃದ್ಧಿಗೆ ಗಮನಹರಿಸಲಿದೆ ಎಂದಿದ್ದಾರೆ.
ಕಿರು ಅರಣ್ಯ ಉತ್ಪನ್ನಗಳು, ಮಹಿಳೆಯರ ನೇತೃತ್ವದ ಸ್ವಸಹಾಯ ಸಂಘಗಳ ಮೂಲಕವೂ ಈ ಪ್ರದೇಶದ ಆರ್ಥಿಕತೆಯನ್ನು ಬಲಪಡಿಸಲಾಗುವುದು ಎಂದು ಗೃಹ ಖಾತೆಯನ್ನು ಹೊಂದಿರುವ ಶರ್ಮಾ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಶಸ್ತ್ರ ನಕ್ಸಲ್ ಹೋರಾಟ ಸಂಪೂರ್ಣವಾಗಿ ನಿರ್ಮೂಲನೆಗೊಂಡಿದೆ. ಉಳಿದ ಕೆಲವರು ಸಹ ಶೀಘ್ರದಲ್ಲೇ ಶರಣಾಗುವ ನಿರೀಕ್ಷೆಯಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಕ್ಸಲರ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬಸ್ತರ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದೂ ಡಿಸಿಎಂ ಹೇಳಿದ್ದಾರೆ.
'ಬಸ್ತರ್ ಅಭಿವೃದ್ಧಿ ಕುರಿತಂತೆ ಇದುವರೆಗೂ ಯಾವುದೇ ನೀಲನಕ್ಷೆ ಹೊಂದಿಲ್ಲ. ಆದರೆ ಪ್ರಗತಿಗೆ ಹೆಚ್ಚಿನ ಒತ್ತು ನೀಡುವುದು ನಮ್ಮ ಸರ್ಕಾರದ ಬದ್ಧತೆ ಆಗಿದೆ' ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

