ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಪ್ರಕ್ರಿಯೆಯಲ್ಲಿ 52 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಎಂಟನೇ ಕರಡು ಪಟ್ಟಿಯನ್ನೂ ಪ್ರಕಟಿಸಲಾಗಿದೆ.
ಗುರುವಾರ ಸಂಜೆವರೆಗೆ ಈ ಪ್ರಮಾಣದ ಪ್ರಕರಣಗಳ ಪರಿಶೀಲನೆ ಪೂರ್ಣಗೊಂಡಿದೆ.
ಇನ್ನೂ ಸುಮಾರು 8 ಲಕ್ಷ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ನಾಲ್ಕು ದಿನಗಳಲ್ಲಿ ಅದು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ವೇಗ ಮುಂದುವರಿದರೆ, ಎಪ್ರಿಲ್ 7ರೊಳಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂತಿಮ ಕರಡು ಮತದಾರರ ಪಟ್ಟಿಯ ಪ್ರಕಟಣೆಯ ನಂತರ 60 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನಗಳಂತೆ ನ್ಯಾಯಾಂಗ ಅಧಿಕಾರಿಗಳು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಎಪ್ರಿಲ್ 23ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 6 ಕೊನೆಯ ದಿನವಾಗಿದೆ. ಆದ್ದರಿಂದ, ಈ ಪರಿಶೀಲನಾ ಪ್ರಕ್ರಿಯೆಯನ್ನು ಅದಕ್ಕೂ ಮುನ್ನ ಪೂರ್ಣಗೊಳಿಸುವುದು ಅಗತ್ಯವಾಗಿದೆ.
ಇದೇ ವೇಳೆ, ಮಾಲ್ಡಾ ಜಿಲ್ಲೆಯ ಕಲಿಯಾಚಕ್ ನಲ್ಲಿ ಬುಧವಾರ ರಾತ್ರಿ ನಡೆದ ಘಟನೆಯ ಬಳಿಕ ಪರಿಶೀಲನಾ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳ ಭದ್ರತೆ ಕುರಿತು ಆತಂಕ ವ್ಯಕ್ತವಾಗಿದೆ. ಕೆಲವರು ಅವರನ್ನು ಘೇರಾವ್ ಮಾಡಿದ ಘಟನೆ ನಡೆದಿದೆ. ಭದ್ರತೆಗಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರಡು ಪಟ್ಟಿಯಲ್ಲಿ ಹೆಸರು ಇಲ್ಲದವರು ನ್ಯಾಯಮಂಡಳಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಆದರೆ, ನ್ಯಾಯಮಂಡಳಿಗಳು ಯಾವಾಗ ಕಾರ್ಯಾರಂಭ ಮಾಡುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

