ಮಾ.26ರಿಂದ ಪ್ರತಿ ಲೀಟರ್ ಡೀಸಿಲ್ ಮತ್ತು ಎಟಿಎಫ್ ಮೇಲೆ ಅನುಕ್ರಮವಾಗಿ 21.50 ರೂ. ಮತ್ತು 29.50 ರೂ.ಗಳ ರಫ್ತು ಸುಂಕಗಳನ್ನು ಮರುಜಾರಿಗೊಳಿಸಿದ್ದ ಸರಕಾರವು ಪೆಟ್ರೋಲ್ ರಫ್ತುಗಳ ಮೇಲಿನ ವಿನಾಯಿತಿಯನ್ನು ಉಳಿಸಿಕೊಂಡಿತ್ತು. ಇದೇ ವೇಳೆ ಕಚ್ಚಾತೈಲ ಬೆಲೆಯೇರಿಕೆಯಿಂದ ಸಾರ್ವಜನಿಕ ವಲಯದ ತೈಲ ಕಂಪನಿಗಳ ಮೇಲಿನ ಒತ್ತಡವನ್ನು ತಗ್ಗಿಸುವ ಪ್ರಯತ್ನವಾಗಿ ಪೆಟ್ರೋಲ್ ಮತ್ತು ಡೀಸಿಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 10 ರೂ.ಕಡಿತಗೊಳಿಸಲಾಗಿತ್ತು.
ಈ ವಿಷಯದಲ್ಲಿ ನ್ಯಾಯಾಂಗ ತೀರ್ಪುಗಳ ಪ್ರಕಾರ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಅಬಕಾರಿ ಸುಂಕ ಎಸ್‌ಇಝಡ್ ಸಂಸ್ಕರಣಾಗಾರಗಳಿಗೆ ಅನ್ವಯಿಸುವುದಿಲ್ಲ ಎಂದು ಕಂದಾಯ ಇಲಾಖೆಯ ತೆರಿಗೆ ಸಂಶೋಧನಾ ಘಟಕದ ಜಂಟಿ ಕಾರ್ಯದರ್ಶಿ ಜೈನೇಂದ್ರ ಸಿಂಗ್ ಕಂಧಾರಿಯವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಮರುಜಾರಿಗೊಳಿಸಲಾದ ಸುಂಕಗಳು ರಿಲಯನ್ಸ್‌ನ ಎಸ್‌ಇಝಡ್ ರಿಫೈನರಿಯಿಂದ ರಫ್ತುಗಳಿಗೆ ಅನ್ವಯಿಸುತ್ತವೆಯೇ ಎನ್ನುವುದು ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ.
ರಿಲಯನ್ಸ್ ಜಾಮನಗರದಲ್ಲಿ ದೇಶೀಯ ಪೂರೈಕೆಗಾಗಿ ವಾರ್ಷಿಕ 33 ಮಿ.ಟನ್ ಸಾಮರ್ಥ್ಯದ ಮತ್ತು ಸಂಪೂರ್ಣ ರಫ್ತಿಗಾಗಿ ವಾರ್ಷಿಕ 35.2 ಮಿ.ಟನ್ ಸಾಮರ್ಥ್ಯದ ಎಸ್‌ಇಝಡ್ ರಿಫೈನರಿ ಹೀಗೆ ಎರಡು ಸಂಸ್ಕರಣಾಗಾರಗಳನ್ನು ಹೊಂದಿದೆ.

