ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಂತರ ಬಂಗಾಳದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯ ಕೊನೆಯ ಮತ ಬುಧವಾರ ಸಂಜೆ ದಾಖಲಾಗಲಿದೆ. ಇದರೊಂದಿಗೆ ಈ ವರ್ಷದ ಚುನಾವಣೆಯ ಚರ್ಚಾ ವಿಷಯವಾಗಿದ್ದ 'ಎಸ್‌ಐಆರ್'ಗೆ ತಾತ್ಕಾಲಿಕ ಬಿಡುವು ಸಿಗಲಿದೆ.
ಬಂಗಾಳದ ಮತದಾರರಿಗೆ ಒಂದೆಡೆ 'ಎಸ್‌ಐಆರ್' ಆತಂಕ. ಇನ್ನೊಂದೆಡೆ, ಈ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸದಿದ್ದರೆ ಪೌರತ್ವವೇ ರದ್ದಾಗುತ್ತದೆ ಎನ್ನುವ ಭಯ. ಈ ಭಯವು ಬಂಗಾಳದ ಜನರನ್ನು ದಾಖಲೆ ಪ್ರಮಾಣದಲ್ಲಿ ಮತಗಟ್ಟೆಗೆ ತಂದು ನಿಲ್ಲಿಸಿದೆ. ಮೊದಲ ಹಂತದಲ್ಲಿ ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆಗೊಂಡಿರುವುದಕ್ಕೆ ಪೌರತ್ವ ರದ್ದಾಗುವ ಭಯವೇ ಕಾರಣ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.
ಗುರುಗ್ರಾಮ, ದೆಹಲಿ, ಫರೀದಾಬಾದ್, ನೋಯ್ಡಾ, ಉತ್ತರ ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಬಂಗಾಳಿ ವಲಸಿಗ ಕಾರ್ಮಿಕರು ನೆಲಸಿದ್ದಾರೆ. ಇವರಲ್ಲಿ ವರ್ಷಗಳಿಂದ ಸ್ವಗ್ರಾಮಕ್ಕೆ ಬಾರದೇ ಇದ್ದವರೂ ಈ ಬಾರಿ ಮತ ಚಲಾಯಿಸಲು ಬಂದಿದ್ದಾರೆ. ಕೆಲವರು ತಮ್ಮ ಹಕ್ಕು ಚಲಾಯಿಸಿ, ಪೌರತ್ವ ಉಳಿಸಿಕೊಳ್ಳಲು ₹4 ಸಾವಿರದಿಂದ ₹5 ಸಾವಿರದಷ್ಟು ಖರ್ಚು ಮಾಡಿದ್ದಾರೆ.
ನೊಯ್ಡಾದಲ್ಲಿ ಮನೆಕೆಲಸ ಮಾಡಿಕೊಂಡಿರುವ ಮಹಿಳೆಯೊಬ್ಬರು ಬಂಗಾಳಕ್ಕೆ ಬಂದು ಮತ ಚಲಾಯಿಸಿ ವಾಪಸ್ ನೊಯ್ಡಾಕ್ಕೆ ಹೋಗಲು ₹4 ಸಾವಿರ ಖರ್ಚು ಮಾಡಿದ್ದಾರೆ. ರೈಲಿನಲ್ಲಿ ಸಾಮಾನ್ಯ ದರ್ಜೆಯ ಸ್ಲೀಪರ್ ಟಿಕೆಟ್ ಸಿಗದ ಕಾರಣ ಅವರು ಅನಿವಾರ್ಯವಾಗಿ ಎಸಿ ಕೋಚ್‌ನಲ್ಲಿ ಹೆಚ್ಚುವರಿ ದರ ಪಾವತಿಸಿ ಪ್ರಯಾಣಿಸಿದ್ದಾರೆ. ಈ ಮಹಿಳೆ ತಮ್ಮ ತಿಂಗಳ ದುಡಿಮೆಯ ಅರ್ಧದಷ್ಟನ್ನು ಒಂದು ಮತಕ್ಕಾಗಿ ಖರ್ಚು ಮಾಡಿದ್ದಾರೆ. ಇವರು ಮಾತ್ರವಲ್ಲ, ಪಶ್ಚಿಮ ಬಂಗಾಳದ ಸಾವಿರಾರು ವಲಸೆ ಕಾರ್ಮಿಕರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಒಂದು ಮತಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ.
'ಎಸ್‌ಐಆರ್ ನಂತರ ಬಂಗಾಳದ ಸುಮಾರು 27 ಲಕ್ಷದಷ್ಟು ಮತದಾರರ ಹೆಸರುಗಳನ್ನು ಚುನಾವಣಾ ಆಯೋಗ ಪಟ್ಟಿಯಿಂದ ಹೊರಗಿಟ್ಟಿದೆ. ಇವರಲ್ಲಿ ಹೆಚ್ಚಿನವರು ಮೇಲ್ಮನವಿ ನ್ಯಾಯಮಂಡಳಿಗಳ ಮೊರೆಹೋಗಿದ್ದಾರೆ. ಆದರೆ, ನ್ಯಾಯಮಂಡಳಿಗಳಲ್ಲಿ ಇದುವರೆಗೆ ಸುಮಾರು 650 ಪ್ರಕರಣಗಳ ಪರಿಶೀಲನೆ ನಡೆದಿದ್ದು, ಇವುಗಳಲ್ಲಿ 139 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಬಾಕಿ ಉಳಿದಿರುವ ಪ್ರಕರಣಗಳು ಎರಡನೆಯ ಹಂತದ ಮತದಾನದ (ಏಪ್ರಿಲ್ 29) ಪೂರ್ವದಲ್ಲಿ ಇತ್ಯರ್ಥಗೊಳ್ಳುವುದು ಅನುಮಾನ. ಹಾಗಾಗಿ ನ್ಯಾಯಮಂಡಳಿಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಎಲ್ಲರಿಗೂ ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೂಚನೆ ನೀಡಿದೆ.
ಒಂದೆಡೆ 'ಎಸ್‌ಐಆರ್' ಗದ್ದಲ. ಇನ್ನೊಂದೆಡೆ, ರಾಜಕೀಯ ಮುಖಂಡರಿಗೆ ನೋಟಿಸ್ ಜಾರಿಗೊಳಿಸುವುದರ ಮೂಲಕ ಚುನಾವಣಾ ಆಯೋಗ ಸುದ್ದಿಯಲ್ಲಿದೆ. ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆದ ಕಾರಣ ಆಯೋಗ ನೋಟಿಸ್ ಜಾರಿಗೊಳಿಸಿದೆ. ಇತ್ತ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಸಂಸದರನ್ನು ದೂಷಿಸಿದ ವಿಚಾರವಾಗಿ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವಿರೋಧ ಪಕ್ಷದ ಟೀಕೆಯನ್ನೂ ಎದುರಿಸುತ್ತಿದೆ. ಈ ವಿಷಯ ಇಟ್ಟುಕೊಂಡು ಮುಖ್ಯ ಚುನಾವಣಾ ಅಧಿಕಾರಿ ಜ್ಞಾನೇಶ್ ಕುಮಾರ್ ಅವರ ಪದಚ್ಯುತಿಗೆ ವಿರೋಧ ಪಕ್ಷ ನೋಟಿಸ್ ಸಲ್ಲಿಸಿದೆ.
ರಾಹುಲ್ ವರಸೆ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಮಾತ್ರ ಚುನಾವಣಾ ಸಮರ ಸಾರಿಲ್ಲ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಮತ್ತು ಕೇರಳದಲ್ಲಿ ಸಿಪಿಎಂನ ಪಿಣರಾಯಿ ವಿಜಯನ್ ಕೂಡ ಅವರ ವಾಗ್ದಾಳಿಗೆ ತುತ್ತಾಗಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆಯ ಸ್ಟಾಲಿನ್ ಜತೆಗೂ ಅವರು ವೇದಿಕೆ ಹಂಚಿಕೊಂಡಿಲ್ಲ.
ಪಟ್ಟಿಯಿಂದ ಕೈಬಿಟ್ಟವರಲ್ಲಿ ಶೇ 34ರಷ್ಟು ಮುಸ್ಲಿಮರು
ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 'ನುಸುಳುಕೋರರ' ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಬಿಜೆಪಿ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟವರಲ್ಲಿ ಶೇ 34ರಷ್ಟು ಜನರು ಮುಸ್ಲಿಮರು ಎನ್ನುತ್ತದೆ ಚುನಾವಣಾ ಆಯೋಗದ ಅಂಕಿ ಅಂಶಗಳು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಮಾತ್ರ ಚುನಾವಣಾ ಸಮರ ಸಾರಿಲ್ಲ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಮತ್ತು ಕೇರಳದಲ್ಲಿ ಸಿಪಿಎಂನ ಪಿಣರಾಯಿ ವಿಜಯನ್ ಕೂಡ ಅವರ ವಾಗ್ದಾಳಿಗೆ ತುತ್ತಾಗಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆಯ ಸ್ಟಾಲಿನ್ ಜತೆಗೂ ಅವರು ವೇದಿಕೆ ಹಂಚಿಕೊಂಡಿಲ್ಲ.

