ಬಂಗಾಂವ್: 'ಮಹಿಳೆಯರನ್ನು ಹಿಂಸಿಸುವ ಗೂಂಡಾಗಳಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಆಶ್ರಯ ನೀಡುತ್ತಿದ್ದು, ಸಂದೇಶ್‌ಖಾಲಿಯ ರೇಖಾಪಾತ್ರ, ಆರ್.ಜಿ.ಕರ್ ಸಂತ್ರಸ್ತೆಯ ತಾಯಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಮಹಿಳೆಯರ ಭದ್ರತೆಯನ್ನು ಖಾತರಿಪಡಿಸುವ ಪಕ್ಷದ ಬದ್ಧತೆಗೆ ಸಾಕ್ಷಿಯಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಬಂಗಾಂವ್‌ನ ಠಾಕೂರ್ ನಗರದಲ್ಲಿ ಭಾನುವಾರ ಮತುಆ ಸುಮದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, 'ನೆರೆಯ ದೇಶದಲ್ಲಿ ಧಾರ್ಮಿಕ ಕಿರಕುಳಕ್ಕೆ ತುತ್ತಾಗಿ ಭಾರತದಲ್ಲಿ ಆಶ್ರಯ ಪಡೆದವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಪೌರತ್ವ ನೀಡಲಾಗುವುದು' ಎಂದು ಭರವಸೆ ನೀಡಿದ್ದಾರೆ.
ಹಿಂಗಲ್‌ಗಂಜ್ ಕ್ಷೇತ್ರದಿಂದ ರೇಖಾ ಪಾತ್ರ ಹಾಗೂ ಪಾನೀಹಾಟಿ ಕ್ಷೇತ್ರದಿಂದ ಆರ್.ಜಿ.ಕರ್ ಸಂತ್ರಸ್ತೆಯ ತಾಯಿ ರತ್ನ ದೇವನಾಥ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
2024ರಲ್ಲಿ ಸ್ಥಳೀಯ ಟಿಎಂಸಿ ನಾಯಕರಿಂದ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯದಿಂದ ಸಂದೇಶ್‌ಖಾಲಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿತ್ತು. ಅದೇ ವರ್ಷ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿತ್ತು.
'ತೃಣಮೂಲ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಸಣ್ಣ ಪ್ರಮಾಣದ ರಾಜಕಾರಣಿ ಕೂಡ ಗೂಂಡಾನಂತೆ ವರ್ತಿಸುತ್ತಿ ದ್ದಾನೆ. ಟಿಎಂಸಿಯು ಅತ್ಯಂತ ಕ್ರೂರವಾದ ಸರ್ಕಾರ ನಡೆಸುತ್ತಿದ್ದು, ಗೂಂಡಾಗಳ ಮೂಲಕ ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದಾರೆ. ಈ ಬಾರಿ ಬದಲಾವಣೆ ಸಮಯ ಬಂದಿದ್ದು, ಸಂತ್ರಸ್ತ ಮಹಿಳೆಯರಿಗೆ ಮೇ 4ರಂದು ರಾಜ್ಯದಲ್ಲಿ ರಚನೆಯಾಗಲಿರುವ ಬಿಜೆಪಿ ಸರ್ಕಾರವು ನ್ಯಾಯ ಒದಗಿಸಲಿದೆ' ಎಂದು ಮೋದಿ ಭರವಸೆ ನೀಡಿದ್ದಾರೆ.
'ಟಿಎಂಸಿ ನೇತೃತ್ವದ ಸರ್ಕಾರವು ರಾಜ್ಯ ವಿಧಾನಸೌಧದಿಂದ ನಡೆಯುತ್ತಿಲ್ಲ. ಪಕ್ಷವು ಆಶ್ರಯ ನೀಡಿರುವ ಗೂಂಡಾಗಳು, ಅಪರಾಧಿಗಳಿಂದ ನಡೆಯುತ್ತಿದೆ. ಇದನ್ನು ಸರಿದಾರಿಗೆ ತರಲು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು' ಎಂದು ಹೇಳಿದ್ದಾರೆ.
294 ವಿಧಾನಸಭಾ ಕ್ಷೇತ್ರ ಹೊಂದಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23ರಂದು ಮೊದಲ ಹಂತದ ಮತದಾನ ನಡೆದಿದ್ದು, ಏಪ್ರಿಲ್ 29ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

