ಭುವನೇಶ್ವರ: ಜನಗಣತಿಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಶಿಕ್ಷಕರು ತಾಪಮಾನ ಏರಿಕೆಯಿಂದ ಬಳಲಿ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಮೃತರಲ್ಲಿ ಒಬ್ಬ ಶಿಕ್ಷಕ ಮಯೂರಗಂಜ್ ಜಿಲ್ಲೆಯವರಾಗಿದ್ದರೆ, ಇನ್ನೊಬ್ಬ ಶಿಕ್ಷಕ ಸುಂದರಘರ್ ಜಿಲ್ಲೆಯವರು.
ಈ ಇಬ್ಬರೂ ಶಿಕ್ಷಕರು ತಮಗೆ ವಹಿಸಿದ್ದ ಹಳ್ಳಿಯಲ್ಲಿ ಜನಗಣತಿಯಲ್ಲಿ ತೊಡಗಿಸಿಕೊಂಡಿದ್ದರು.
ಎರಡೂ ಜಿಲ್ಲೆಯಲ್ಲೂ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್‌ವರೆಗೆ ಇತ್ತು. ಇದರಿಂದ ತೀವ್ರ ಬಳಲಿದ್ದ ಶಿಕ್ಷಕರನ್ನು ಭಾನುವಾರ ಪತ್ಯೇಕ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.
ಮೃತರನ್ನು ಮಯೂರಗಂಜ್ ಜಿಲ್ಲೆಯ ಬೆಟ್‌ನೋಟಿ ಬ್ಲಾಕ್‌ನ ವೈದ್ಯನಾಥನ್ ಹೈಸ್ಕೂಲ್‌ನ ಶಿಕ್ಷಕ ರಾಜಕುಮಾರ್ ಹೆಂಬ್ರಾಮ್ ಹಾಗೂ ಸುಂದರಘರ್ ಜಿಲ್ಲೆಯ ಗುರುಂಡಿಯಾ ಬ್ಲಾಕ್‌ನ ಜರ್ದಾ ಸರ್ಕಾರಿ ಹೈಸ್ಕೂಲ್‌ನ ಶಿಕ್ಷಕ ಅನುರಾಗ್ ಎಕ್ಕಾ ಎಂದು ಗುರುತಿಸಲಾಗಿದೆ.
ಶಿಕ್ಷಕರಿಗೆ ಆರೋಗ್ಯ ಸರಿ ಇಲ್ಲದಿದ್ದರೂ ಅಧಿಕಾರಿಗಳು ಗಣತಿ ಕೆಲಸಕ್ಕೆ ಹಾಕಿದ್ದರು. ತೀವ್ರ ತಾಪಮಾನದಿಂದ ಅವರ ಆರೋಗ್ಯ ಇನ್ನಷ್ಟು ಬಿಗಡಾಯಿಸಿತ್ತು ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಒಡಿಶಾದಲ್ಲೂ ಬೇಸಿಗೆಯ ತಾಪಮಾನ ಹೆಚ್ಚಳವಾಗಿದ್ದು, ಉಷ್ಣ ಅಲೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ತಾಪಮಾನ ಹೆಚ್ಚಳದಿಂದ ಕಳೆದೊಂದು ವಾರದಲ್ಲಿ ಒಡಿಶಾದಲ್ಲಿ ಮೂರು ಜನ ಮೃತಪಟ್ಟಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

