ಪ್ರಯಾಗರಾಜ್ : ಮಹಾಕುಂಭಮೇಳದ ವೇಳೆ ಮಣಿ ಮಾರಾಟಗಾರ್ತಿಯಾಗಿ ಜನಮನ ಸೆಳೆದಿದ್ದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಅಪ್ರಾಪ್ತ ವಯಸ್ಕಳು ಎಂದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (ಎನ್ಸಿಎಸ್ಟಿ) ನಡೆಸಿದ ವಿಚಾರಣೆಯಲ್ಲಿ, ಮೊನಾಲಿಸಾ ವಿವಾಹದ ಸಮಯದಲ್ಲಿ ಅಪ್ರಾಪ್ತ ವಯಸ್ಸಿನವರಾಗಿದ್ದರು ಎಂದು ದೃಢಪಟ್ಟಿದೆ. ಇದರ ಆಧಾರದ ಮೇಲೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಫರ್ಮಾನ್ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ನಡುವಿನ ಪ್ರೇಮ ವಿವಾಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಗಮನ ಸೆಳೆದಿತ್ತು. ಆದರೆ, ಅವರ ವಯಸ್ಸಿನ ಬಗ್ಗೆ ಸಂಶಯ ವ್ಯಕ್ತವಾದ ನಂತರ ಪ್ರಕರಣ ಹೊಸ ತಿರುವು ಪಡೆದುಕೊಂಡಿತು.
ದೂರು ಆಧರಿಸಿ ಎನ್ಸಿಎಸ್ಟಿ ಕೇರಳ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಮಗ್ರ ತನಿಖೆ ಕೈಗೊಂಡಿತು. ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರ ಮೇಲ್ವಿಚಾರಣೆಯಲ್ಲಿ ನಡೆದ ಪರಿಶೀಲನೆಯಲ್ಲಿ, ಮೊನಾಲಿಸಾ ಪಾರ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಅಪ್ರಾಪ್ತ ವಯಸ್ಕಳು ಎಂಬುದು ಬೆಳಕಿಗೆ ಬಂದಿದೆ.
ಮಹೇಶ್ವರದ ಸರ್ಕಾರಿ ಆಸ್ಪತ್ರೆ ದಾಖಲೆಗಳ ಪ್ರಕಾರ, ಮೊನಾಲಿಸಾ ಡಿಸೆಂಬರ್ 30, 2009ರಂದು ಜನಿಸಿದ್ದು, ಮಾರ್ಚ್ 11, 2026ರಂದು ನಡೆದ ವಿವಾಹದ ವೇಳೆಗೆ ಆಕೆಗೆ ಕೇವಲ 16 ವರ್ಷ ವಯಸ್ಸು ಇತ್ತು.
ತನಿಖೆಯಲ್ಲಿ ಕೇರಳದಲ್ಲಿ ಅವರನ್ನು ವಯಸ್ಕಳಾಗಿ ತೋರಿಸಲು ನಕಲಿ ಜನನ ಪ್ರಮಾಣಪತ್ರ ಬಳಸಿ ವಿವಾಹ ನಡೆಸಲಾಗಿದೆ ಎಂಬುದು ಬಹಿರಂಗವಾಗಿದೆ. ಈ ನಕಲಿ ದಾಖಲೆಗಳನ್ನು ರದ್ದುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದೇ ವೇಳೆ, ಕೇರಳದ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ವಿವಾಹ ನೋಂದಾಯಿಸಲಾಗಿದೆ ಎನ್ನುವುದೂ ತಿಳಿದುಬಂದಿದೆ. ಮದುವೆ ನಡೆದ ದೇವಾಲಯದ ಅಧಿಕಾರಿಗಳು ದಂಪತಿಗಳು ನೀಡಿದ ಆಧಾರ್ ವಿವರಗಳನ್ನೇ ಅವಲಂಬಿಸಿದ್ದರು ಎಂದು ವರದಿಯಾಗಿದೆ.
ಈ ಬೆಳವಣಿಗೆಗಳ ನಂತರ, ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಗಳಡಿ ಹಲವು ಆರೋಪಗಳನ್ನು ದಾಖಲಿಸಲಾಗಿದೆ. ಮೊನಾಲಿಸಾ ಅವರ ಬುಡಕಟ್ಟು ಹಿನ್ನೆಲೆಯನ್ನೂ ಪ್ರಕರಣದಲ್ಲಿ ಪರಿಗಣಿಸಲಾಗಿದೆ.
ಪ್ರಕರಣ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದು, ಕೆಲವು ಸಂಘಟನೆಗಳು ಮತ್ತು ವ್ಯಕ್ತಿಗಳ ಪಾತ್ರವಿರುವ ಸಾಧ್ಯತೆಗಳ ಕುರಿತು ಆರೋಪಗಳು ಕೇಳಿಬಂದಿವೆ.
ಎನ್ಸಿಎಸ್ಟಿ ಕೇರಳ ಮತ್ತು ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ್ದು, ಎಪ್ರಿಲ್ 22ರಂದು ಹೊಸದಿಲ್ಲಿಯಲ್ಲಿ ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಿದೆ. ಜೊತೆಗೆ, ಪ್ರಕರಣದ ಪ್ರಗತಿ ಕುರಿತು ಪ್ರತಿ ಮೂರು ದಿನಗಳಿಗೊಮ್ಮೆ ವಿವರವಾದ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.

