ಬಾಂಗ್ಲಾದೇಶದ ವಿದೇಶಾಂಗ ಸಚಿವ ಖಲಿಯುರ್ ರಹಮಾನ್ ಅವರು ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ತಾರಿಕ್ ರಹಮಾನ್ ನೇತೃತ್ವದ BNP ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಉಭಯ ದೇಶಗಳ ನಡುವಿನ ಅತ್ಯುನ್ನತ ಮಟ್ಟದ ದ್ವಿಪಕ್ಷೀಯ ಸಂಪರ್ಕ ಇದಾಗಿದೆ.
'ಬಾಂಗ್ಲಾದೇಶ ಮೊದಲು' ಎಂಬ ತತ್ವವು 'ಪರಸ್ಪರ ನಂಬಿಕೆ, ಗೌರವ ಮತ್ತು ಪರಸ್ಪರ ಲಾಭ'ದ ಆಧಾರದಲ್ಲಿ ನೂತನ ಸರ್ಕಾರದ ವಿದೇಶಾಂಗ ನೀತಿಗೆ ಮಾರ್ಗದರ್ಶಿಯಾಗಲಿದೆ ಎಂದು ರಹಮಾನ್ ಅವರು ಜೈಶಂಕರ್ ಅವರಿಗೆ ತಿಳಿಸಿದ್ದಾರೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಬಾಂಗ್ಲಾದೇಶದ ನಿಯೋಗವು ಶೇಖ್ ಹಸೀನಾ ಮತ್ತು ಅವರ ಗೃಹ ಸಚಿವ ಅಸದುಝ್ಝಮಾನ್ ಖಾನ್ ಕಮಾಲ್ ಅವರನ್ನು ಹಸ್ತಾಂತರಿಸುವಂತೆ ತನ್ನ ಮನವಿಯನ್ನು ಪುನರುಚ್ಚರಿಸಿದೆ ಎಂದು ಹೇಳಿಕೆ ತಿಳಿಸಿದೆ.
ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಕಳೆದ ವರ್ಷದ ನವೆಂಬರ್ ನಲ್ಲಿ ಹಸೀನಾ ಮತ್ತು ಕಮಾಲ್ ಅವರ ಅನುಪಸ್ಥಿತಿಯಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿ ಇಬ್ಬರಿಗೂ ಮರಣದಂಡನೆ ವಿಧಿಸಿದೆ.
ಜೈಶಂಕರ್-ರಹಮಾನ್ ಭೇಟಿ ಕುರಿತು ಸಂಕ್ಷಿಪ್ತ ಹೇಳಿಕೆಯನ್ನು ಹೊರಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಸ್ತಾಂತರ ಮನವಿ ಅಥವಾ ಇತರ ನಿರ್ದಿಷ್ಟ ವಿಷಯಗಳ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಬಾಂಗ್ಲಾದೇಶದ ಹೊಸ ಸರ್ಕಾರದೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸುವ ಭಾರತದ ಬಯಕೆಯನ್ನು ಜೈಶಂಕರ್ ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ. ಸಂಬಂಧಿತ ದ್ವಿಪಕ್ಷೀಯ ಕಾರ್ಯವಿಧಾನಗಳ ಮೂಲಕ ಪಾಲುದಾರಿಕೆಯನ್ನು ಗಾಢಗೊಳಿಸಲು ಅವಕಾಶಗಳನ್ನು ಅನ್ವೇಷಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಿಕೆ ತಿಳಿಸಿದೆ.
ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದ ಹೇಳಿಕೆಯು ಹೆಚ್ಚು ವಿವರಣಾತ್ಮಕವಾಗಿದ್ದು, ಡೀಸೆಲ್ ಪೂರೈಕೆ, ವೀಸಾ ಸೌಲಭ್ಯ, ಶರೀಫ್ ಉಸ್ಮಾನ್ ಹಾದಿ ಹತ್ಯೆ ಪ್ರಕರಣದಲ್ಲಿನ ಶಂಕಿತ ಆರೋಪಿಗಳ ಹಸ್ತಾಂತರ ಸೇರಿದಂತೆ ದ್ವಿಪಕ್ಷೀಯ ವಿಷಯಗಳ ಕುರಿತು ಸಮಾಲೋಚನೆಗಳನ್ನು ಉಲ್ಲೇಖಿಸಿದೆ.
2024ರ ವಿದ್ಯಾರ್ಥಿ ದಂಗೆಯ ನಾಯಕ ಹಾದಿಯನ್ನು ಕಳೆದ ವರ್ಷದ ಡಿಸೆಂಬರ್ನಲ್ಲಿ ಢಾಕಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶಂಕಿತ ಆರೋಪಿಗಳಾದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳದ ಬೊಂಗಾಂವ್ ನಲ್ಲಿ ಬಂಧಿಸಲಾಗಿದ್ದು, ನ್ಯಾಯಾಲಯವು ಅವರನ್ನು ಎನ್ಐಎ ಕಸ್ಟಡಿಗೆ ಒಪ್ಪಿಸಿತ್ತು.
ವಿದೇಶಾಂಗ ವ್ಯವಹಾರಗಳ ಕುರಿತು ಬಾಂಗ್ಲಾದೇಶದ ಪ್ರಧಾನಿಗೆ ಸಲಹೆಗಾರರಾಗಿರುವ ಹುಮಾಯೂನ್ ಕಬೀರ್ ಅವರನ್ನು ಒಳಗೊಂಡ ನಿಯೋಗವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿದೆ.

