ನವದೆಹಲಿ: ಇಸ್ರೊ ತನ್ನ ಮುಂಬರುವ ಮಾನವ ಸಹಿತ ಗಗನಯಾನ ಯೋಜನೆಯ ಭಾಗವಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಎರಡನೇ ಇಂಟಿಗ್ರೇಟೆಡ್ ಏರ್ ಡ್ರಾಪ್ ಪರೀಕ್ಷೆಯನ್ನು (ಐಎಡಿಟಿ -02) ಯಶಸ್ವಿಯಾಗಿ ಪೂರೈಸಿದೆ.
ಈ ಪರೀಕ್ಷೆಯ ಮೂಲಕ ಮುಂದಿನ ವರ್ಷ ನಿಗದಿಯಾಗಿರುವ ಭಾರತದ ಮೊದಲ ಮಾನವ ಸಹಿತ ಗಗನಯಾನ ಮಿಷನ್'ನ ಕ್ಯಾಪ್ಸೂಲ್ ಅನ್ನು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಕೆಳಗಿಳಿಸುವ ಪರೀಕ್ಷೆಯನ್ನು ಪೂರ್ಣಗೊಳಿಸಿದೆ.
ಗಗನಯಾತ್ರಿಗಳು ಕುಳಿತುಕೊಳ್ಳುವ ಕ್ಯಾಪ್ಯೂಲ್, ಭೂಮಿಗೆ ಮರಳುವ ವೇಳೆ ಸುರಕ್ಷಿತವಾಗಿರುವುದರ ಬಗ್ಗೆ ಖಚಿತ ಪಡಿಸಿಕೊಳ್ಳುವ ಉದ್ದೇಶ ಹೊಂದಿತ್ತು. ಇದೀಗ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.
ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ 4.8 ಟನ್ ತೂಕದ ಸಿಬ್ಬಂದಿ ರಹಿತ ಕ್ಯಾಪ್ಯೂಲ್ ಮಾಡ್ಯೂಲ್ ಅನ್ನು 3 ಕಿಮೀ ಎತ್ತರದಿಂದ ಬೀಳಿಸಲಾಯಿತು. ಮೊದಲಿಗೆ ಸಣ್ಣ ಪ್ಯಾರಾಚೂಟ್ಗಳು ತೆರೆದುಕೊಂಡು ಕ್ಯಾಪ್ಯೂಲ್ ಅನ್ನು ಸ್ಥಿರಗೊಳಿಸಿದವು. ನಂತರ ದೊಡ್ಡ ಪ್ಯಾರಾಚೂಟ್ಗಳು ತೆರೆದುಕೊಂಡು ಕ್ಯಾಪ್ಯೂಲ್ನ ವೇಗವನ್ನು ನಿಧಾನಗೊಳಿಸಿದವು. ಅಂತಿಮವಾಗಿ ಮುಖ್ಯ ಪ್ಯಾರಾಚೂಟ್ಗಳು ತೆರೆದುಕೊಂಡು ಸಮುದ್ರದಲ್ಲಿ ಕ್ಯಾಪ್ಯೂಲ್ ಇಳಿದಿದೆ.
ಯಶಸ್ವಿ ಪರೀಕ್ಷೆಯ ಕುರಿತು ಸಚಿವ ಜಿತೇಂದ್ರ ಸಿಂಗ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಮುಂದಿನ ವರ್ಷ ನಿಗದಿಯಾಗಿರುವ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಎರಡನೇ ಇಂಟಿಗ್ರೇಟೆಡ್ ಏರ್ ಡ್ರಾಪ್ ಟೆಸ್ಟ್ (ಐಎಡಿಟಿ -02) ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಇಸ್ರೊಗೆ ಅಭಿನಂದನೆಗಳು' ಎಂದು ಬರೆದುಕೊಂಡಿದ್ದಾರೆ.

