ಈ ಸಂಬಂಧ ಸಚಿವಾಲಯದ ಕಾರ್ಯದರ್ಶಿ ನೀರಜ್ ಮಿತ್ತಲ್ ಅವರು ಭಾರತ ಸರ್ಕಾರದ ಎಲ್ಲ ಕಾರ್ಯದರ್ಶಿಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಔಷಧಿ, ಆಹಾರ ಸಂಸ್ಕರಣೆ, ಪಾಲಿಮರ್, ಕೃಷಿ, ಪ್ಯಾಕೇಜಿಂಗ್, ಬಣ್ಣ, ಉಕ್ಕು, ಲೋಹಗಳು, ಸಿರಾಮಿಕ್ಸ್, ಗಾಜು, ಎರೋಸೋಲ್ಗಳು, ಫೌಂಡ್ರಿ, ಫೋರ್ಜಿಂಗ್, ಭಾರಜಲ, ಯುರೇನಿಯಂ ಮತ್ತು ಬೀಜಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಕೈಗಾರಿಕಾ ಘಟಕಗಳು 2026ರ ಮಾರ್ಚ್ಗೂ ಮುನ್ನ ತಮ್ಮ ಸಗಟು LPG ಬಳಕೆಯ ಶೇ.70ರಷ್ಟನ್ನು ಪಡೆಯಲಿದ್ದು, ಇದು ದೈನಂದಿನ 0.2 ಟಿಎಂಟಿ ಒಟ್ಟು ಕ್ಷೇತ್ರ ಮಿತಿಗೆ ಒಳಪಟ್ಟಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಉತ್ಪಾದನಾ ಪ್ರಕ್ರಿಯೆಯಲ್ಲಿ LPG ನಿರ್ಣಾಯಕ ಹಾಗೂ ಬದಲಿಸಲಾಗದ ಅಗತ್ಯವಾಗಿರುವ ಕೈಗಾರಿಕೆಗಳಿಗೆ ಪೂರೈಕೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಇಂತಹ ಕ್ಷೇತ್ರಗಳಿಗೆ ಪೈಪ್ಡ್ ನೈಸರ್ಗಿಕ ಅನಿಲ (PNG) ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ಅಗತ್ಯವನ್ನು ಮನ್ನಾ ಮಾಡಲಾಗಿದ್ದು, ನಿಗದಿತ ಷರತ್ತುಗಳನ್ನು ಪಾಲಿಸುವ ಮೂಲಕ ಕೈಗಾರಿಕಾ ಕಾರ್ಯಾಚರಣೆಗಳು ಅಬಾಧಿತವಾಗಿರುವಂತೆ ನೋಡಿಕೊಳ್ಳಲಾಗುತ್ತದೆ.
LPGಯನ್ನು ಇಂಧನವಾಗಿ ಬಳಸುವ ಮತ್ತು ಕ್ರಮೇಣ PNGಗೆ ಪರಿವರ್ತನೆಗೊಳ್ಳಬಹುದಾದ ಕೈಗಾರಿಕೆಗಳು ಹಾಗೂ LPG ಬದಲಿಸಲಾಗದ ಅಗತ್ಯವಾಗಿರುವ ಕೈಗಾರಿಕೆಗಳ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಸಚಿವಾಲಯ ಗುರುತಿಸಿದೆ.
ಭಾರತವು ತನ್ನ ಶೇ.60ರಷ್ಟು LPGಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಈ ಪೈಕಿ ಶೇ.90ರಷ್ಟು ಸಾಮಾನ್ಯವಾಗಿ ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಈ ಜಲಮಾರ್ಗವು ಒತ್ತಡಕ್ಕೊಳಗಾದಾಗ ಮಾರ್ಚ್ ನಲ್ಲಿ ಮಾಸಿಕ ಆಮದು ಫೆಬ್ರವರಿಯ 2.04 ಮಿಲಿಯನ್ ಟನ್ನಿಂದ 1.12 ಮಿಲಿಯನ್ ಟನ್ ಗೆ ಕುಸಿದಿತ್ತು.

