ಜೆರುಸಲೇಂ: ಇರಾನ್ ಮೇಲೆ ನೌಕಾ ದಿಗ್ಬಂಧನವನ್ನು ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಇಸ್ರೇಲ್ ಬೆಂಬಲಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಹೇಳಿದ್ದು ಈ ವಿಷಯದಲ್ಲಿ ತಮ್ಮ ಸರಕಾರ ಅಮೆರಿಕದೊಂದಿಗೆ ಸಂಪೂರ್ಣ ಸಮನ್ವಯದಲ್ಲಿದೆ ಎಂದಿದ್ದಾರೆ.
ʼಇರಾನ್ ನಿಯಮಗಳನ್ನು(ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಯ) ಉಲ್ಲಂಘಿಸಿದೆ. ಅಧ್ಯಕ್ಷ ಟ್ರಂಪ್ ನೌಕಾ ದಿಗ್ಬಂಧನ ವಿಧಿಸಲು ನಿರ್ಧರಿಸಿದ್ದಾರೆ. ಸಹಜವಾಗಿ ನಾವು ಈ ದೃಢ ನಿಲುವನ್ನು ಬೆಂಬಲಿಸುತ್ತೇವೆ ಮತ್ತು ಅಮೆರಿಕದೊಂದಿಗೆ ನಿರಂತರ ಸಮನ್ವಯದಲ್ಲಿದ್ದೇವೆ' ಎಂದು ಸೋಮವಾರ ಸಂಪುಟ ಸಭೆಯಲ್ಲಿ ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ.
ಕದನ ವಿರಾಮ ಜಾರಿಯಾಗಬೇಕು ಮತ್ತು ಇರಾನ್ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಬೇಕು ಎಂಬುದು ಒಪ್ಪಂದದ ಮೂಲ ಅಂಶವಾಗಿತ್ತು. ಮಾತುಕತೆಯ ನಿಯಮಗಳನ್ನು ಇರಾನ್ ಸ್ಪಷ್ಟವಾಗಿ ಉಲ್ಲಂಘಿಸಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಾತುಕತೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿದ್ದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ತನಗೆ ತಿಳಿಸಿದ್ದಾರೆ ಎಂದು ನೆತನ್ಯಾಹು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಇರಾನ್‍ನಿಂದ ಸಂವರ್ಧಿತ ಯುರೇನಿಯಂ ಅನ್ನು ವರ್ಗಾಯಿಸುವುದು ಮತ್ತು ಮುಂದಿನ ವರ್ಷಗಳಲ್ಲಿ ಇರಾನ್ ಯುರೇನಿಯಂ ಸಂವರ್ಧನೆ ನಡೆಸುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಟ್ರಂಪ್‍ಗೆ ಮುಖ್ಯ ವಿಷಯವಾಗಿತ್ತು. ಇದು ನಮಗೆ ಕೂಡಾ ಮುಖ್ಯವಾಗಿದೆ ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ.

