ಇಂಫಾಲ: ಟ್ರೋಂಗ್ಲಾಓಬಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳ ಹತ್ಯೆಯನ್ನು ಖಂಡಿಸಿ ಮಣಿಪುರದ ಇಂಫಾಲ್ ಪೂರ್ವದಲ್ಲಿ ಶುಕ್ರವಾರ ರಾತ್ರಿ ಜನರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಇಂಫಾಲ ಪೂರ್ವದ ಖುರೈ ಲ್ಯಾಮ್ಲಾಂಗ್ ಬಝಾರ್‌ನಲ್ಲಿ ರಾತ್ರಿ ಪ್ರತಿಭಟನೆಗಳು ಭುಗಿಲೆದ್ದವು. ಅಲ್ಲಿ ದೊಡ್ಡ ಸಂಖ್ಯೆ ಜನರು ಕರ್ಫ್ಯೂ ಉಲ್ಲಂಘಿಸಿ ರ್ಯಾಲಿಯಲ್ಲಿ ಪಾಲ್ಗೊಂಡರು.
ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು. ಭದ್ರತಾ ಪಡೆಗಳು ಗುಂಪನ್ನು ನಿಯಂತ್ರಿಸಲು ಮುಂದಾದವು. ಅವರು ಪ್ರತಿಭಟನಕಾರರನ್ನು ಚದುರಿಸಲು ಅಶ್ರವಾಯು ಸೆಲ್ ಪ್ರಯೋಗಿಸಿದರು. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡರು. ಗಾಯಗೊಂಡವರನ್ನು ಜವಾಹರ್ಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಯಿತು.

