ನೋಯ್ಡಾ: ಕಾರ್ಮಿಕರ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ 24 ಕಾರ್ಖಾನೆಗಳ 203 ಗುತ್ತಿಗೆದಾರರು ಹಾಗೂ ಕಪ್ಪು ಪಟ್ಟಿಗೆ ಸೇರಿಸಲಾದ ಸಂಸ್ಥೆಗಳ ಪರವಾನಿಗಳನ್ನು ರದ್ದುಗೊಳಿಸಲು ಗೌತಮಬುದ್ಧ ನಗರ ಜಿಲ್ಲಾಡಳಿತ ಶುಕ್ರವಾರ ಕ್ರಮ ಕೈಗೊಂಡಿದೆ.
ನೋಯ್ಡಾದಲ್ಲಿ ಕಾರ್ಮಿಕರ ಹಿಂಸಾತ್ಮಕ ಪ್ರತಿಭಟನೆ ನಡೆದ ಕೆಲವು ದಿನಗಳ ಬಳಿಕ ಗೌತಮ ಬುದ್ಧ ನಗರ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ.
ಕಾರ್ಮಿಕರಿಗೆ ಬಾಕಿ ಇರುವ 1.16 ಕೋ.ರೂ.ವನ್ನು ಪಾವತಿಸುವಂತೆ ಕೂಡ ಗುತ್ತಿಗೆದಾರರಿಗೆ ಕಾರ್ಮಿಕ ಇಲಾಖೆ ನಿರ್ದೇಶನ ನೀಡಿದೆ. ಕಾರ್ಮಿಕರಿಗೆ ಕಾನೂನು ಬದ್ದ ಸೌಲಭ್ಯಗಳನ್ನು ನೀಡದೆ ವಂಚಿಸಿದ ಆರೋಪ ಎದುರಿಸುತ್ತಿರುವ ಗುತ್ತಿಗೆದಾರರಿಗೆ ನೋಟಿಸು ಜಾರಿಗೊಳಿಸಲಾಗಿದೆ. ಬಾಕಿ ಇರುವುದನ್ನು ಅವರಿಗೆ ಪಾವತಿಸುವಂತೆ ನಿರ್ದೇಶಿಸಲಾಗಿದೆ ಎಂದು ಹೆಚ್ಚುವರಿ ಕಾರ್ಮಿಕ ಆಯುಕ್ತ ರಾಕೇಶ್ ದ್ವಿವೇದಿ ಹೇಳಿದ್ದಾರೆ.
ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿರುವ 203 ಗುತ್ತಿಗೆದಾರರ ವಿರುದ್ಧ ಪರವಾನಿಗೆ ರದ್ದುಗೊಳಿಸುವ, ಬಾಕಿ ಹಣ ವಸೂಲಿ ಮಾಡುವ ಹಾಗೂ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಉಳಿದ ಗುತ್ತಿಗೆದಾರರನ್ನು ಕೂಡ ಗುರುತಿಸಲಾಗುತ್ತಿದೆ ಹಾಗೂ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಮಿಕರ ಪ್ರತಿಭಟನೆ ಸಂದರ್ಭ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾದ ಕಾರ್ಮಿಕರಿಗೆ ಕೆಲಸ ನೀಡಿರುವ ನಿರ್ದಿಷ್ಟ ಗುತ್ತಿಗೆದಾರರ ಪಾತ್ರವನ್ನು ಪರಿಶೀಲಿಸಲಾಗುತ್ತಿದೆ ಎಂದು ದ್ವಿವೇದಿ ಹೇಳಿದ್ದಾರೆ. ವೇತನ ಏರಿಕೆ ಮಾಡುವಂತೆ ಗೌತಮ ಬುದ್ಧ ನಗರದಲ್ಲಿ ಕಾರ್ಮಿಕರ ಪ್ರತಿಭಟನೆ ನಡೆದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಈ ಬೆಳವಣಿಗೆಯ ನಂತರ ಸರಕಾರ ನೇಮಿಸಿದ ಉನ್ನತ ಮಟ್ಟದ ಸಮಿತಿ ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಅನುಗುಣವಾಗಿ ಗೌತಮ ಬುದ್ಧ ನಗರ್ ಹಾಗೂ ಸಮೀಪದ ಗಾಝಿಯಾಬಾದ್ ಜಿಲ್ಲೆಗಳಲ್ಲಿ 74 ನಿಗದಿತ ಉದ್ಯೋಗಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಶೇ.21ರಷ್ಟು ವೇತನ ಹೆಚ್ಚಳ ಜಾರಿಗೊಳಿಸಲಾಗಿದೆ. ಪರಿಷ್ಕೃತ ವೇತನ ಎಪ್ರಿಲ್ 1ರಿಂದ ಜಾರಿಗೆ ಬಂದಿದೆ. ಹೊಸ ದರಗಳ ಆಧಾರದಲ್ಲಿ ಮೇ 7ರಿಂದ ಮೇ 10ರ ನಡುವೆ ಪಾವತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

