ನವದೆಹಲಿ: 'ಲೇಖಕರು, ಚಿಂತಕರು ಸೇರಿ ಎಲ್ಲರ ಅಭಿಪ್ರಾಯಗಳನ್ನು ನಾವು ಗೌರವಿಸುತ್ತೇವೆ. ಆದರೆ, 'ವಾಟ್ಸ್ ಆಯಪ್ ಯೂನಿವರ್ಸಿಟಿ'ಯಿಂದ ಬರುವ ಮಾಹಿತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಶಬರಿಮಲೆ ಸೇರಿದಂತೆ ದೇಶದ ವಿವಿಧೆಡೆ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನಡೆಸುತ್ತಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಬಿ.ವಿ ನಾಗರತ್ನ, ಎಂ.ಎಂ ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಅಗಸ್ಟೀನ್ ಜಾರ್ಜ್ ಮಸೀಹ್, ಪ್ರಸನ್ನ ಬಿ. ವರಾಳೆ, ಆರ್.ಮಹಾದೇವನ್ ಅವರು ಈ ಪೀಠದಲ್ಲಿದ್ದಾರೆ.
ವಿಚಾರಣೆ ವೇಳೆ ದಾವುಡಿ ಬೋಹ್ರಾ ಸಮುದಾಯದ ಮುಖ್ಯಸ್ಥರ ಪರ ಹಾಜರಾದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರು, ಧಾರ್ಮಿಕ ನಂಬಿಕೆಗಳ ವಿಷಯಗಳಲ್ಲಿ ನ್ಯಾಯಾಂಗ ಸಂಯಮದಿಂದ ವರ್ತಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಬರೆದ ಲೇಖನವೊಂದನ್ನು ಉಲ್ಲೇಖಿಸಿದರು.
ಇದಕ್ಕೆ ಸಿಜೆಐ ಸೂರ್ಯಕಾಂತ್ ಅವರು, 'ನಾವು ಎಲ್ಲಾ ಗಣ್ಯ ವ್ಯಕ್ತಿಗಳು, ನ್ಯಾಯಶಾಸ್ತ್ರಜ್ಞರನ್ನು ಗೌರವಿಸುತ್ತೇವೆ. ಆದರೆ ವೈಯಕ್ತಿಕ ಅಭಿಪ್ರಾಯ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಾಗಿರುತ್ತದೆ' ಎಂದು ಹೇಳಿದರು.
'ಎಲ್ಲಾ ಮೂಲಗಳಿಂದಲೂ ಜ್ಞಾನವನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಹಾನಿಯಿಲ್ಲ' ಎಂದು ಕೌಲ್ ಪ್ರತಿಪಾದಿಸಿದರು.
'ಜ್ಞಾನ ಮತ್ತು ಬುದ್ಧಿವಂತಿಕೆಯು ಯಾವುದೇ ಮೂಲದಿಂದ, ಯಾವುದೇ ದೇಶದಿಂದ ಅಥವಾ ಯಾವುದೇ ವಿಶ್ವವಿದ್ಯಾಲಯದಿಂದ ಬಂದರೂ ಅದನ್ನು ಸ್ವಾಗತಿಸಬೇಕು' ಎಂದು ಕೌಲ್ ತಮ್ಮ ವಾದ ಮುಂದುವರಿಸಿದರು.
ಅದಕ್ಕೆ ನ್ಯಾಯಮೂರ್ತಿ ನಾಗರತ್ನ ಅವರು, 'ಆದರೆ, ವಾಟ್ಸ್ ಆಯಪ್ ಯೂನಿವರ್ಸಿಟಿಯಿಂದ ಅಲ್ಲ' ಎಂದು ಹಾಸ್ಯದ ಧಾಟಿಯಲ್ಲಿ ಹೇಳಿದರು. ಅದಕ್ಕೆ ಕೌಲ್, ಆ ವಿಷಯವನ್ನು ಇಲ್ಲಿ ಚರ್ಚಿಸುತ್ತಿಲ್ಲ ಎಂದು ಹೇಳಿದರು.
'ಯಾವ ವಿಶ್ವವಿದ್ಯಾಲಯವು ಒಳ್ಳೆಯದು ಅಥವಾ ಕೆಟ್ಟದು ಎಂಬ ವಿಷಯಕ್ಕೆ ನಾನು ಹೋಗುತ್ತಿಲ್ಲ. ಅದು ಇಲ್ಲಿ ಅಪ್ರಸ್ತುತವಾಗಿದೆ. ಜ್ಞಾನ ಮತ್ತು ಮಾಹಿತಿ ಎಲ್ಲಿಂದ ಬಂದರೂ ಅದನ್ನು ಸ್ವೀಕರಿಸಬೇಕು ಎಂಬುದು ನನ್ನ ಅಂಶ' ಎಂದು ತಿಳಿಸಿದರು.
ಋತುಸ್ರಾವದ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ಏರಿ, ದೇವಸ್ಥಾನ ಪ್ರವೇಶಿಸಲು ಹಕ್ಕಿದೆ ಎಂದು 2018ರಲ್ಲಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಬಹುಮತದ ತೀರ್ಪು ನೀಡಿತ್ತು.

