ನವದೆಹಲಿ: ಪುದುಚೇರಿಯ ವೈದಿಕುಪ್ಪಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶ್ರೀಲಂಕಾದ ದಕ್ಷಿಣ ಭಾರತ ಉಪ ಕೌನ್ಸುಲ್ ಜನರಲ್ ಗಣೇಶನಾಥನ್ ಕೇತೀಶ್ವರನ್ ಅವರ ಉಪಸ್ಥಿತಿಗೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಶನಿವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ರಾಜತಾಂತ್ರಿಕ ನಿಯಮಗಳ ಉಲ್ಲಂಘನೆಯಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಸ್ಥಳೀಯ ಮೀನುಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲು ಎನ್‌ಡಿಎ ಘಟಕದ ಸದಸ್ಯ ಪಕ್ಷ ಲಚ್ಚಿಯ ಜನನಾಯಗ ಕಚ್ಚಿ (ಎಲ್‌ಜೆಕೆ)ಯ ಮುಖ್ಯಸ್ಥ ಜೋಸ್ ಚಾರ್ಲ್ಸ್ ಮಾರ್ಟಿನ್, ಕೇತೀಶ್ವರನ್ ಅವರನ್ನು ಆಹ್ವಾನಿಸಿದ್ದರು. ಬಿಜೆಪಿ ಪುದುಚೇರಿ ಅಧ್ಯಕ್ಷ ವಿ.ಪಿ. ರಾಮಲಿಂಗಂ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಖೇರಾ ಹೇಳಿದ್ದಾರೆ.
ಈ ಕಾರ್ಯಕ್ರಮವು ರಾಜತಾಂತ್ರಿಕ ಸಂಬಂಧಗಳ ಕುರಿತ 1961ರ ವಿಯೆನ್ನಾ ಒಡಂಬಡಿಕೆಯ ಉಲ್ಲಂಘನೆಯಾಗಿದೆ ಎಂದು ಖೇರಾ ತಿಳಿಸಿದ್ದಾರೆ. ಈ ಒಡಂಬಡಿಕೆಯು ಆತಿಥೇಯ ದೇಶದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ರಾಜತಾಂತ್ರಿಕರು ಹಸ್ತಕ್ಷೇಪ ನಡೆಸುವುದನ್ನು ನಿರ್ಬಂಧಿಸುತ್ತದೆ. ಈ ಒಡಂಬಡಿಕೆಗೆ ಭಾರತ ಮತ್ತು ಶ್ರೀಲಂಕಾ ಎರಡೂ ದೇಶಗಳು ಸಹಿ ಹಾಕಿವೆ ಎಂದು ಅವರು ತಿಳಿಸಿದ್ದಾರೆ.
ಇದರ ವಿರುದ್ಧ ಸಂಬಂಧಿತ ಸಂಸ್ಥೆಗಳು ಕ್ರಮ ತೆಗೆದುಕೊಳ್ಳುತ್ತವೆಯೇ ಎಂದು ಅವರು ಪ್ರಶ್ನಿಸಿದ್ದಾರೆ. "ರಾಜಕೀಯ ಕಾರ್ಯಕ್ರಮವೊಂದಕ್ಕೆ ರಾಜತಾಂತ್ರಿಕರನ್ನು ಆಹ್ವಾನಿಸಿರುವುದಕ್ಕೆ ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಗುಪ್ತಾ ಎಲ್‌ಜೆಕೆ ಮತ್ತು ಬಿಜೆಪಿಗೆ ನೋಟಿಸ್ ನೀಡುತ್ತಾರೆಯೇ? ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶ್ರೀಲಂಕಾ ರಾಜತಾಂತ್ರಿಕನಿಗೆ ಪ್ರತಿಭಟನಾ ಪತ್ರ ಬರೆಯುತ್ತಾರೆಯೇ? ಅಥವಾ ಬಿಜೆಪಿಯು ತನ್ನ ಕೆಲಸಕ್ಕಾಗಿ ಮಾರ್ಟಿನ್ ಮತ್ತು ಅವರ ಪಕ್ಷವನ್ನು ಬಳಸಿರುವುದರಿಂದ, ಈ ಇಬ್ಬರೂ ಮೌನವಾಗಿರುತ್ತಾರೆಯೇ?" ಎಂದು ಖೇರಾ ಪ್ರಶ್ನಿಸಿದ್ದಾರೆ.

