ಕುನೊ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ಭಾರತದಲ್ಲಿ ಜನಿಸಿದ್ದ 24 ತಿಂಗಳ ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಇದು ಭಾರತದ ಚೀತಾಗಳ ಸಂರಕ್ಷಣೆ ಯೋಜನೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇದರೊಂದಿಗೆ ಭಾರತದಲ್ಲಿ ಚೀತಾಗಳ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಶನಿವಾರ ಮರಿಗಳಿಗೆ ಜನ್ಮ ನೀಡಿರುವ ಈ ಚೀತಾ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ 'ಗಾಮಿನಿ'ಯ ಮರಿಯಾಗಿದೆ.
ಭೂಮಿಯ ಮೇಲಿನ ಅತಿ ವೇಗದ ಪ್ರಾಣಿ ಎಂದು ಹೆಸರಾದ ಚೀತಾಗಳು ಭಾರತದಲ್ಲಿ ಅಳಿವಿನಂಚಿಗೆ ತಲುಪಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಮ್ಮ ಪರಿಸರದಲ್ಲಿ ಚೀತಾಗಳನ್ನು ರಕ್ಷಿಸಲು ಮತ್ತು ಸಂತಾನೋತ್ಪತ್ತಿ ಹೆಚ್ಚಿಸಲು ಆಫ್ರಿಕಾದಿಂದ ಚೀತಾಗಳನ್ನು ತರಿಸಿಕೊಳ್ಳುತ್ತಿದೆ.

