HEALTH TIPS

ವಿಶ್ವದ ಅತಿ ದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಾರಿದ ಭಾರತ: ಐಎಂಎಫ್

ನವದೆಹಲಿ: ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಇತ್ತೀಚಿನ ವಿಶ್ವ ಆರ್ಥಿಕ ಮುನ್ನೋಟದ ಅಂದಾಜಿನಂತೆ ಭಾರತವು ನಾಮಮಾತ್ರ ಜಿಡಿಪಿ ಆಧಾರದಲ್ಲಿ ವಿಶ್ವದ ಐದು ಅಗ್ರಮಾನ್ಯ ಆರ್ಥಿಕತೆಗಳ ಗುಂಪಿನಿಂದ ಹೊರಬಿದ್ದಿದೆ.

ಆದಾಗ್ಯೂ ಈ ಕುಸಿತಕ್ಕೆ ಆರ್ಥಿಕ ದೌರ್ಬಲ್ಯಕ್ಕಿಂತ ಕರೆನ್ಸಿ ಮೌಲ್ಯದಲ್ಲಿನ ಏರಿಳಿತಗಳು ಕಾರಣವಾಗಿದ್ದು, ಮುಂಬರುವ ವರ್ಷಗಳಲ್ಲಿ ಭಾರತವು ತಾನು ಕಳೆದುಕೊಂಡಿರುವ ನೆಲೆಯನ್ನು ಮರಳಿ ಪಡೆದುಕೊಳ್ಳಬಹುದು ಮುನ್ನಂದಾಜುಗಳು ಸೂಚಿಸುತ್ತಿವೆ ಎಂದು indiatoday.in ವರದಿ ಮಾಡಿದೆ.

ನಾಮಮಾತ್ರ ಜಿಡಿಪಿ ಆಧಾರದಲ್ಲಿ ಈಗ ಭಾರತವು ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿದೆ.

ಇತ್ತೀಚಿನ ಅಂದಾಜುಗಳ ಪ್ರಕಾರ ಅಮೆರಿಕ (30 ಲಕ್ಷ ಕೋಟಿ ಡಾಲರ್ ಗಿಂತ ಹೆಚ್ಚು),ಚೀನಾ (ಸುಮಾರು 19ರಿಂದ 20 ಲಕ್ಷ ಕೋಟಿ ಡಾಲರ್),‌ ಜರ್ಮನಿ (ಸುಮಾರು ಐದು ಲಕ್ಷ ಕೋಟಿ ಡಾಲರ್), ಜಪಾನ್ ಮತ್ತು ಬ್ರಿಟನ್‌ (ತಲಾ 4ರಿಂದ 4.5 ಲಕ್ಷ ಕೋಟಿ ಡಾಲರ್) ಅಗ್ರ ಐದು ಆರ್ಥಿಕತೆಗಳಾಗಿವೆ. ಭಾರತ (4 ಲಕ್ಷ ಕೋಟಿ ಡಾಲರ್ ಗಿಂತ ತುಸು ಹೆಚ್ಚು) ಆರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಭಾರತದ ಜಿಡಿಪಿ ಶ್ರೇಯಾಂಕ ಕುಸಿದಿದ್ದು ಏಕೆ?:

ಜಾಗತಿಕ ಜಿಡಿಪಿ ಶ್ರೇಯಾಂಕಗಳನ್ನು ಡಾಲರ್‌ಗಳ ಲೆಕ್ಕದಲ್ಲಿ ಅಳೆಯಲಾಗುತ್ತದೆ ಮತ್ತು ಇದು ಕರೆನ್ಸಿ ವಿನಿಮಯ ದರಗಳನ್ನು ನಿರ್ಣಾಯಕ ಅಂಶವನ್ನಾಗಿಸಿದೆ.

ರೂಪಾಯಿ ದುರ್ಬಲಗೊಂಡಾಗ ದೇಶೀಯ ಉತ್ಪಾದನೆಯು ಬದಲಾಗದಿದ್ದರೂ ಭಾರತದ ಆರ್ಥಿಕತೆಯ ಡಾಲರ್ ಮೌಲ್ಯವು ಕುಸಿಯುತ್ತದೆ. ಕಳೆದೊಂದು ವರ್ಷದಲ್ಲಿ ಡಾಲರ್‌ನೆದುರು ರೂಪಾಯಿ ಮೌಲ್ಯವು 84-85ರ ಮಟ್ಟದಿಂದ 90ಕ್ಕೂ ಅಧಿಕಕ್ಕೆ ಕುಸಿದಿದೆ. ಹೀಗಾಗಿ ಡಾಲರ್ ಲೆಕ್ಕದಲ್ಲಿ ಭಾರತದ ಆರ್ಥಿಕತೆಯ ಗಾತ್ರ ಕಡಿಮೆಯಾಗಿದೆ ಮತ್ತು ಶ್ರೇಯಾಂಕಗಳಲ್ಲಿ ಬದಲಾವಣೆಗೆ ಕಾರಣವಾಗಿದೆ.

ಭಾರತ, ಜಪಾನ್ ಮತ್ತು ಬ್ರಿಟನ್ ಮೂರೂ 4ರಿಂದ 5 ಲಕ್ಷ ಕೋಟಿ ಡಾಲರ್ ಶ್ರೇಣಿಯಲ್ಲಿರುವುದರಿಂದ ತುಲನಾತ್ಮಕವಾಗಿ ಸಣ್ಣ ಕರೆನ್ಸಿ ಏರಿಳಿತಗಳು ಶ್ರೇಯಾಂಕಗಳನ್ನು ಬದಲಿಸಬಹುದು.

ರೂಪಾಯಿ ಮೇಲಿನ ಒತ್ತಡ:

ಪಶ್ಚಿಮ ಏಶ್ಯಾ ಸಂಘರ್ಷದಿಂದಾಗಿ ಕಚ್ಚಾತೈಲ ಬೆಲೆಗಳಲ್ಲಿ ಏರಿಕೆಯಾಗಿದೆ. ಭಾರತವು ತನ್ನ ಕಚ್ಚಾತೈಲ ಅಗತ್ಯದ ಶೇ.90ರಷ್ಟನ್ನು ಆಮದು ಮಾಡಿಕೊಳ್ಳುವುದರಿಂದ ಖರೀದಿಗಾಗಿ ಹೆಚ್ಚಿನ ಡಾಲರ್‌ಗಳನ್ನು ಪಾವತಿಸುತ್ತಿದೆ ಮತ್ತು ಇದು ರೂಪಾಯಿ ಮೇಲೆ ನೇರ ಒತ್ತಡವನ್ನು ಹೇರುತ್ತಿದೆ.

ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ತಮ್ಮ ಹೂಡಿಕೆಗಳನ್ನು ಹಿಂಪಡೆಯುತ್ತಿದ್ದಾರೆ. ಇದು ಕೂಡ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯಲು ಕಾರಣವಾಗಿದೆ.

ತೈಲ,ಇಲೆಕ್ಟ್ರಾನಿಕ್ಸ್ ಮತ್ತು ಚಿನ್ನದ ಆಮದುಗಳಿಂದಾಗಿ ಭಾರತವು ನಿರಂತರ ವ್ಯಾಪಾರ ಕೊರತೆಯನ್ನು ಎದುರಿಸುತ್ತಿದೆ. ಇದು ವಿದೇಶಿ ಕರೆನ್ಸಿಗೆ ನಿರಂತರ ಬೇಡಿಕೆಯನ್ನು ಸೃಷ್ಟಿಸುತ್ತದೆ.

ಆರ್ಥಿಕತೆಯು ವಿದೇಶ ಬಂಡವಾಳ ಹರಿವುಗಳನ್ನೂ ಅವಲಂಬಿಸಿದ್ದು,ಜಾಗತಿಕ ಒತ್ತಡದ ಸಮಯದಲ್ಲಿ ಬಂಡವಾಳ ಹರಿವು ಅಸ್ಥಿರಗೊಳ್ಳುತ್ತದೆ.

ಆರ್ಥಿಕ ಸಮೀಕ್ಷೆಯು ರೂಪಾಯಿ ಮೌಲ್ಯವು ಅದರ ನೈಜ ಸಾಮರ್ಥ್ಯಕ್ಕಿಂತ ಕಡಿಮೆಯಿದೆ ಎಂದು ಬಣ್ಣಿಸಿದ್ದು,ಇದು ಬಲವಾದ ದೇಶೀಯ ಬೆಳವಣಿಗೆ ಮತ್ತು ಬಾಹ್ಯ ದೌರ್ಬಲ್ಯಗಳ ನಡುವಿನ ಅಂತರವನ್ನು ಪ್ರತಿಬಿಂಬಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries