ಕಾಸರಗೋಡು: ಮತದಾರರ ಪಟ್ಟಿ ಪರಿಷ್ಕರಿಸಿದ(ಎಸ್‍ಐಆರ್) ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುತೇಕ ಮತದಾರರನ್ನು ಮತಗಟ್ಟೆಗೆ ತಲುಪುವಂತೆ ಮಾಡಿದೆ. ಮತದಾನ ಎಂದರೆ ಮೂಗು ಮುರಿಯುತ್ತಿದ್ದವರೂ ಈ ಬಾರಿ ದೂರದೂರಿಂದಲೂ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿರುವುದು ವಿಶೇಷತೆಯಾಗಿತ್ತು.
ದೂರದ ಮುಂಬೈ, ಬೆಂಗಳೂರು, ಕೊಚ್ಚಿ, ತಿರುವನಂತಪುರ ಸೇರಿದಂತೆ ಉದ್ಯೋಗಕ್ಕಾಗಿ ತೆರಳಿದ್ದವರಲ್ಲಿ ಬಹುತೇಕ ಮಂದಿ ಊರಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಇನ್ನು ಯುದ್ಧಾತಂಕದ ಹಿನ್ನೆಲೆಯಲ್ಲಿ ವಿದೇಶದಲ್ಲಿರುವವರಲ್ಲಿ ಬೆರಳೆಣಿಕೆ ಮಂದಿಗೆ ಮಾತ್ರ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಮತದಾನದಲ್ಲಿ ಪಾಲ್ಗೊಳ್ಳದಿದ್ದಲ್ಲಿ ಪೌರತ್ವಕ್ಕೂ ಧಕ್ಕೆಯುಂಟಾಗಲಿದೆ ಎಂಬ ªಪ್ರಚಾರವೂ ಬಹುತೇಕ ಮಂದಿಯನ್ನುಮತದಾನಕ್ಕೆ ಪ್ರೇರೇಪಿಸಿತ್ತು.
ಕಾರ್ಮಿಕರ ಕೊರತೆ:
ಜಿಲ್ಲೆಯಲ್ಲಿ ನೂರಾರು ಮಂದಿ ಇತರ ರಾಜ್ಯ ಕಾರ್ಮಿಕರಿದ್ದು, ಇವರಲ್ಲಿ ಬಹುತೇಕ ಮಂದಿ ಬಂಗಾಳಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಂಪು ಕಲ್ಲಿನ ಕ್ವಾರೆ, ಮರದ ಕಾರ್ಖಾನೆ, ತೇಪಿನ ಕೆಲಸದಲ್ಲಿ ನಿರತರಾಗಿರುವವರು ಬಂಗಾಳಿ, ಅಸ್ಸಾಂ ಸೇರಿದಂತೆ ಉತ್ತರದ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಈ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಕಾರ್ಮಿಕರೂ ಊರಿಗೆ ತೆರಳಿರುವುದರಿಂದ ಈ ವಲಯಗಳಲ್ಲಿನ ಕೆಲಸ ಕಾರ್ಮಿಕರ ಕೊರತೆಯಿಂದ ಸ್ಥಗಿತಗೊಳ್ಳುವಂತಾಗಿದೆ. ಬಹುತೇಕ ಕೆಂಪುಕಲ್ಲು ಕ್ವಾರಿ, ಮರದ ಕಾರ್ಖಾನೆಗಳು ಕೆಲಸ ಸ್ಥಗಿತಗೊಳಿಸಿದೆ.
ಕಠಿಣ ಕೆಲಸಗಳಲ್ಲಿ ದಿನಪೂರ್ತಿ ತೊಡಗಿಸಿಕೊಂಡು, ಬಿಡುವಿಲ್ಲದೆ ಕೆಲಸ ನಡೆಸುತ್ತಿರುವುದರಿಂದ ಈ ಪ್ರದೇಶದ ಕೆಂಪುಕಲ್ಲು ಕ್ವಾರಿ, ಕಾರ್ಖಾನೆಗಳಲ್ಲಿ ಉತ್ತರ ರಾಜ್ಯದ ಕಾರ್ಮಿಕರನ್ನೇ ತೊಡಗಿಸಿಕೊಳ್ಳಲಾಗುತ್ತಿದೆ. ಇದರಿಂದ ಊರಿನ ಕೂಲಿ ಕಾರ್ಮಿಕರು ಕೆಲಸದ ಕೊರತೆ ಅನುಭವಿಸುತ್ತಿರುವುದಾಗಿಯೂ ದೂರು ಕೇಳಿಬರುತ್ತಿದೆ. ಆದರೆ, ಊರಿನ ಕಾರ್ಮಿಕರು ಇಂತಹ ಕಠಿಣ ಕೆಲಸದಲ್ಲಿ ತೊಡಗಿಸಿಕೊಳ್ಳಲು ಹಿಂದೇಟುಹಾಕುತ್ತಿರುವುದಾಗಿ ಕ್ವಾರಿ ಮಾಲಿಕರು ತಿಳಿಸುತ್ತಾರೆ. ಈ ಹಿಂದಿನ ಚುನಾವಣೆಗಳಲ್ಲಿ ಇತರ ರಾಜ್ಯ ಕಾರ್ಮಿಕರು ಮತದಾನಕ್ಕೆ ತೆರಳುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಊರಿಗೆ ತೆರಳಲು ಹೆಚ್ಚಿನ ಖರ್ಚುವೆಚ್ಚ ಹಾಗೂ ದಿವಸಗಳು ತಗಲುವುದರಿಂದ ಮತದಾನ ಪಕ್ರಿಯೆಯಿಂದ ದೂರ ಉಳಿಯುತ್ತಿದ್ದರು. ಆದರೆ ಈ ಬಾರಿ ಎಸ್‍ಐಆರ್ ಹಿನ್ನೆಲೆಯಲ್ಲಿ ಮತದಾನದಿಂದ ಬಿಟ್ಟು ನಿಂತಲ್ಲಿ ತಮ್ಮ ಪೌರತ್ವಕ್ಕೆ ಧಕ್ಕೆಯುಂಟಾಗಬಹುದೆಂಬ ಭೀತಿಯಿಂದ ಎಲ್ಲಾ ಕಾರ್ಮಿಕರೂ ಮತದಾನಕ್ಕಾಗಿ ಊರಿಗೆ ತೆರಳಿದ್ದಾರೆ.
(ಕಾರ್ಮಿಕರ ಕೊರತೆಯಿಂದ ಬೆದ್ರಂಪಳ್ಳದ ಮರದ ಕಾರ್ಖಾನೆಯೊಂದು ತಾತ್ಕಾಳಿಕವಾಗಿ ಕೆಲಸ ಸ್ಥಗಿತಗೊಳಿಸಬೇಕಾಗಿ ಬಂದಿದೆ.)



