ನವದೆಹಲಿ: 'ಅಪ್ರಕಟಿತ ಆತ್ಮಚರಿತ್ರೆ'ಯಾದ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಯ ವಿಚಾರವಾಗಿ ನನ್ನನ್ನು ಅನಗತ್ಯವಾಗಿ ಎಳೆದು ತರಲಾಯಿತು ಎಂದು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಹೇಳಿದ್ದಾರೆ.
'ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನ್‌ಅರ್ಥಿಂಗ್ ಮಿಲಿಟರಿ ಮಿಥ್ಸ್ ಅಂಡ್ ಮಿಸ್ಟರೀಸ್' ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.
ನಾನು ಆ ಘಟನೆಯಿಂದ ಹೊರ ಬಂದಿದ್ದು, ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿದ್ದೇನೆ. ಮೂರನೆಯದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಈ ವರ್ಷದ ಆರಂಭದಲ್ಲಿ ನವರಣೆ ಅವರ 'ಅಪ್ರಕಟಿತ ಆತ್ಮಚರಿತ್ರೆ'ಯಾದ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ವಿಚಾರ ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.
'ಪುಸ್ತಕವನ್ನು ಪರಿಶೀಲಿಸುವವರೆಗೆ ಅದನ್ನು ತಡೆಹಿಡಿಯುವಂತೆ ರಕ್ಷಣಾ ಸಚಿವಾಲಯವು ಪ್ರಕಾಶಕರಿಗೆ ಸೂಚಿಸಿತ್ತು. ನನ್ನ ಮಟ್ಟಿಗೆ ವಿಷಯ ಅಲ್ಲಿಗೆ ಮುಗಿದಿತ್ತು. ನಾನು ಮುಂದೆ ಸಾಗಿದ್ದೆ... ಅದು ಮುಗಿದ ಅಧ್ಯಾಯ. ಆದರೆ, ಅನಗತ್ಯವಾಗಿ ನನ್ನನ್ನು ಉಲ್ಲೇಖಿಸುವುದು, ಪ್ರಕಟವಾಗದ ಪುಸ್ತಕದ ವಿಷಯಕ್ಕೆ ನನ್ನನ್ನು ಎಳೆದು ತಂದು ಸುದ್ದಿಯಾಗುವಂತೆ ಮಾಡಿದ್ದು ಅಗತ್ಯವಿರಲಿಲ್ಲ' ಎಂದು ನರವಣೆ 'ಪಿಟಿಐ' ಸಂದರ್ಶನದಲ್ಲಿ ಹೇಳಿದ್ದಾರೆ.
ಫೆಬ್ರುವರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಈ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಉಲ್ಲೇಖಿಸದಂತೆ ತಡೆಯಲಾಗಿತ್ತು. ಏಕೆಂದರೆ ಅದು ಇನ್ನೂ ಪ್ರಕಟವಾಗಿರಲಿಲ್ಲ.
ಸೇನಾ ದಂತಕಥೆಗಳ ಅನಾವರಣ...
ನರವಣೆ ಅವರ ಇತ್ತೀಚಿನ ಪುಸ್ತಕವು ಗಂಭೀರ ಶೈಕ್ಷಣಿಕ ಪ್ರಯತ್ನಕ್ಕಿಂತ ಹೆಚ್ಚಾಗಿ ಮನರಂಜನಾ ಓದಿಗಾಗಿ ಸಿದ್ಧಪಡಿಸಲಾಗಿದೆ. ರೂಪಾ ಪಬ್ಲಿಕೇಷನ್ಸ್ ಹೊರತಂದಿರುವ ಈ ಪುಸ್ತಕವು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸಂಬಂಧಿಸಿದ ಕೆಲವು ರೋಚಕ ಕಥೆಗಳು ಮತ್ತು ದಂತಕಥೆಗಳನ್ನು ಒಳಗೊಂಡಿದೆ.
ಪುಸ್ತಕದಲ್ಲಿ ನರವಣೆ ಅವರು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಬಳಕೆಯಾಗುವ 'ಜೈ ಹಿಂದ್' ಅಭಿನಂದನೆಯ ಮೂಲವನ್ನು ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಸೇನೆಯಲ್ಲಿ ಅದರ ಅಳವಡಿಕೆಯವರೆಗೆ ವಿವರಿಸಿದ್ದಾರೆ.
'ಜೈ ಹಿಂದ್' ಮೊದಲು ಭಾರತೀಯ ವಾಯುಪಡೆಯಲ್ಲಿ ಬಳಕೆಯಾಯಿತು. ನಂತರ ಸೇನೆ ಮತ್ತು ನೌಕಾಪಡೆಯಲ್ಲೂ ಅಳವಡಿಸಿಕೊಳ್ಳಲಾಯಿತು.
ಹಿಂದೆ ಸೆಲ್ಯೂಟ್ ಮಾಡುವಾಗ ಯಾವುದೇ ಶಬ್ದ ಮಾಡುತ್ತಿರಲಿಲ್ಲ. ಆಯಾ ರೆಜಿಮೆಂಟ್‌ಗಳು 'ಸತ್ ಶ್ರೀ ಅಕಾಲ್' ಅಥವಾ 'ರಾಮ್ ರಾಮ್' ಎಂಬ ತಮ್ಮದೇ ಆದ ಘೋಷಣೆಗಳನ್ನು ಬಳಸುತ್ತಿದ್ದವು.

