ಕೋಲ್ಕತ್ತ: ನಗರದ ಜಾದವ್‌ಪುರ ವಿಶ್ವವಿದ್ಯಾಲಯವು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ಮಾತಿನ ಚಕಮಕಿಯ ಕೇಂದ್ರಬಿಂದುವಾಯಿತು.
ಪನಿಹಾಟಿಯಲ್ಲಿ ನಡೆದ ಬಿಜೆಪಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, '2011ರಿಂದ ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಈ ವಿಶ್ವವಿದ್ಯಾಲಯವು ಅಶಾಂತಿಯ ಸಂಕೇತವಾಗಿ ಮಾರ್ಪಟ್ಟಿದೆ' ಎಂದು ವಾಗ್ದಾಳಿ ನಡೆಸಿದ್ದರು.
'ಜಾದವ್‌ಪುರ ವಿಶ್ವವಿದ್ಯಾಲಯವು ಒಂದು ಕಾಲದಲ್ಲಿ ಅಪಾರ ಗೌರವ ಹೊಂದಿತ್ತು. ಅದರ ಅಡಿಪಾಯವು ಬಲವಾದ ಶೈಕ್ಷಣಿಕ ಮೌಲ್ಯಗಳ ಮೇಲೆ ನಿರ್ಮಿತವಾಗಿತ್ತು. ಆದರೆ, ಇಂದು ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಜನರಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಒತ್ತಾಯಿಸಲಾಗುತ್ತಿದೆ' ಎಂದು ಮೋದಿ ಆರೋಪಿಸಿದ್ದರು.
'ವಿಶ್ವವಿದ್ಯಾಲಯದ ಕ್ಯಾಂಪಸ್ ಗೋಡೆಗಳ ಮೇಲೆ ದೇಶವಿರೋಧಿ ಘೋಷಣೆಗಳನ್ನು ಬರೆಯಲಾಗುತ್ತಿದೆ. ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರಚೋದಿಸಲಾಗುತ್ತಿದೆ. ತನ್ನದೇ ಆದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳನ್ನು ರಕ್ಷಿಸಲು ಸಾಧ್ಯವಾಗದ ಟಿಎಂಸಿ ಸರ್ಕಾರದಿಂದ ರಾಜ್ಯದ ಭವಿಷ್ಯ ಕಾಪಾಡಲು ಸಾಧ್ಯವಿಲ್ಲ' ಎಂದಿದ್ದರು.
'ನಮಗೆ ಅರಾಜಕತೆ ಬೇಡ; ನಮಗೆ ಆರೋಗ್ಯಕರ ಶೈಕ್ಷಣಿಕ ವಾತಾವರಣ ಬೇಕು. ನಮಗೆ ಇಲ್ಲಿ ಸಂವಾದ ಬೇಕು, ಬೆದರಿಕೆಗಳಲ್ಲ' ಎಂದಿದ್ದರು.
ಮಮತಾ ತಿರುಗೇಟು
'ಪ್ರತಿಷ್ಠಿತ ಜಾದವ್‌ಪುರ ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೀವು ಬಣ್ಣಿಸುವ ರೀತಿ ಇದೇನಾ? ಶಿಷ್ಟಾಚಾರ ಮತ್ತು ಸೌಜನ್ಯದ ಬಗ್ಗೆ ನಿಮ್ಮ ಪರಿಕಲ್ಪನೆ ಇದೇನಾ? ಜಾದವ್‌ಪುರ ವಿಶ್ವವಿದ್ಯಾಲಯವು ನಿಮ್ಮದೇ ಸರ್ಕಾರದ ಎನ್‌ಐಆರ್‌ಎಫ್ ಶ್ರೇಯಾಂಕ ಪಟ್ಟಿಯಲ್ಲಿ ವರ್ಷದಿಂದ ವರ್ಷಕ್ಕೆ ಉನ್ನತ ಸ್ಥಾನಗಳನ್ನು ಪಡೆಯುತ್ತಲೇ ಬಂದಿದೆ. ಹೀಗಿದ್ದರೂ ಅಂತಹ ಶ್ರೇಷ್ಠ ಕೇಂದ್ರವನ್ನು ಅವಮಾನಿಸಲು ನೀವು ಮುಂದಾಗುತ್ತಿದ್ದೀರಾ? ನೀವು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಾ' ಎಂದು ಮೋದಿ ವಿರುದ್ಧ ಮಮತಾ ಗುಡುಗಿದ್ದಾರೆ.
ಜಾದವ್‌ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಅರ್ಹತೆಯ ಮೂಲಕ ಸ್ಥಾನವನ್ನು ಗಳಿಸಿದ್ದಾರೆ ಮತ್ತು ಬುದ್ಧಿವಂತಿಕೆ ಹಾಗೂ ಪ್ರಶ್ನಿಸುವ ಸಾಮರ್ಥ್ಯದೊಂದಿಗೆ ಪದವಿಗಳನ್ನು ಪಡೆದು ಹೊರಬರುತ್ತಾರೆ. ಅದು ಅರಾಜಕತೆಯಲ್ಲ. ಅದು ಶಿಕ್ಷಣ ಮತ್ತು ಶ್ರೇಷ್ಠತೆ.
ಅರಾಜಕತೆ ಎಂದರೆ ವಿದ್ಯಾರ್ಥಿಗಳು ಧ್ವನಿ ಎತ್ತುವುದಲ್ಲ... ಅರಾಜಕತೆ ಎಂದರೆ ನ್ಯಾಯದ ಬದಲಿಗೆ ಬುಲ್ಡೋಜರ್‌ಗಳನ್ನು ಅಧಿಕಾರದ ಸಾಧನವಾಗಿ ಬಳಸುವುದು, ಅರಾಜಕತೆ ಎಂದರೆ ರೈತರು ಸಾಯುತ್ತಿರುವಾಗ ಅವರ ಧ್ವನಿಯನ್ನು ಹತ್ತಿಕ್ಕುವುದು, ಅರಾಜಕತೆ ಎಂದರೆ ಅತ್ಯಾಚಾರ ಮತ್ತು ಇತರ ಘೋರ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರು ರಾಜಕೀಯ ಲಾಭಕ್ಕಾಗಿ ಮುಕ್ತವಾಗಿ ಓಡಾಡುವುದು, ಅರಾಜಕತೆ ಎಂದರೆ ಬಡವರಿಗೆ ಸಲ್ಲಬೇಕಾದ ಹಕ್ಕುಗಳನ್ನು ನಿರಾಕರಿಸುವುದು, ಅರಾಜಕತೆ ಎಂದರೆ ಮತಗಳಿಗಾಗಿ ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸುವುದು, ಅರಾಜಕತೆ ಎಂದರೆ ಮಾಧ್ಯಮಗಳನ್ನು ಎದುರಿಸಲು ನಿರಾಕರಿಸುವುದು, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಮತ್ತು ಪ್ರಶ್ನೆಗಳನ್ನು ಎದುರಿಸಲು ನಿರಾಕರಿಸುವುದು, ಅರಾಜಕತೆ ಎಂದರೆ ಮಣಿಪುರ ಉರಿಯುತ್ತಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿ, ನೀವು ಚುನಾವಣೆಗಳಲ್ಲಿ ಬ್ಯುಸಿಯಾಗುವುದಾಗಿದೆ ಎಂದು ಮಮತಾ ಲೇವಡಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಪತನವಲ್ಲ. ಬದಲಾಗಿ ಅದು ಪ್ರಜಾಪ್ರಭುತ್ವದ ಜೀವಂತಿಕೆಯಾಗಿದೆ. ಅರವಿಂದರಂತಹ ರಾಷ್ಟ್ರೀಯವಾದಿಗಳಿಂದ ಪ್ರೇರಿತವಾದ ಶೈಕ್ಷಣಿಕ ಸಂಸ್ಥೆಯನ್ನು ದಯವಿಟ್ಟು ದೂಷಿಸಬೇಡಿ. ದಯವಿಟ್ಟು ಬಂಗಾಳವನ್ನು ಅವಮಾನಿಸಬೇಡಿ ಎಂದು ಮೋದಿ ವಿರುದ್ಧ ಮಮತಾ ಆಕ್ರೋಶ ಹೊರಹಾಕಿದ್ದಾರೆ.

