ವಾಷಿಂಗ್ಟನ್: ಅಮೆರಿಕದೊಂದಿಗೆ ಇರಾನ್ ಮತ್ತೆ ಸಂಧಾನ ಮಾತುಕತೆಗೆ ಬಂದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪಾಕಿಸ್ತಾನದೊಂದಿಗಿನ ಮಾತುಕತೆಯು ಮುರಿದುಬಿದ್ದ ಬೆನ್ನಲ್ಲೇ ಟ್ರಂಪ್ ಮಾತನಾಡಿದ್ದಾರೆ.
'ಇರಾನ್ ಮತ್ತೆ ಮಾತುಕತೆಗೆ ಬರುತ್ತದೋ ಇಲ್ಲವೋ ಎಂದು ಗೊತ್ತಿಲ್ಲ.
ಆದರೆ ಅವರು ಮತ್ತೆ ಬಂದರೂ, ಬರದಿದ್ದರೂ ಆ ಕುರಿತು ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಸಂಧಾನ ಮಾತುಕತೆಗೆ ಬರದಿದ್ದರೂ ನಮಗೆ ಚಿಂತೆಯಿಲ್ಲ' ಎಂದು ಹೇಳಿದ್ದಾರೆ.
ಫೆ.28ರಂದು ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ನಡೆಸಿದ್ದವು. ಇದರಿಂದ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಎರಡು ವಾರಗಳ ಕದನ ವಿರಾಮ ಘೋಷಿಸಲಾಗಿದೆ.
ಆದರೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆ ಫಲಪ್ರದವಾಗಿಲ್ಲದ ಕಾರಣ, ಸಂಘರ್ಷ ಮತ್ತೆ ಆರಂಭವಾಗುವ ಭೀತಿಯಿದೆ.

