ವಾಷಿಂಗ್ಟನ್: ವರ್ಜೀನಿಯಾದ ಮಾಜಿ ಗವರ್ನರ್ ಜಸ್ಟಿನ್ ಫೇರ್‌ಫ್ಯಾಕ್ಸ್ ತಮ್ಮ ಪತ್ನಿಯನ್ನು ಕೊಲೆ ಮಾಡಿದ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಲ್ಲಿನ ಉಪನಗರ ಆಯಂಡಾಲ್‌ನಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ.
ಕಳೆದ ವರ್ಷ ಪತ್ನಿ ಸೆರಿನಾ ಫೇರ್‌ಫ್ಯಾಕ್ಸ್ (49) ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಜಸ್ಟಿನ್ ತೀವ್ರ ಹತಾಶೆಗೊಂಡಿದ್ದರು ಎಂದು ಅವರ ಆಪ್ತ ಸ್ನೇಹಿತರೊಬ್ಬರು ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ.
ಎರಡು ವರ್ಷಗಳ ಹಿಂದೆಯೆ ನಾವು ಬೇರ್ಪಟ್ಟಿದ್ದೇವೆ ಎಂದು ಸೆರಿನಾ ಫೇರ್‌ಫ್ಯಾಕ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಿದ್ದರು. ಆದಾಗ್ಯೂ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ದುರಂತ ನಡೆದಾಗ ಮಕ್ಕಳಿಬ್ಬರೂ ಮನೆಯಲ್ಲೇ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಂತ ವೈದ್ಯೆಯಾಗಿದ್ದ ಪತ್ನಿಯನ್ನು ಮನೆಯ ಬೇಸ್‌ಮೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಜಸ್ಟಿನ್, ನಂತರ ಮೇಲಿನ ಮಹಡಿಯ ಮಲಗುವ ಕೋಣೆಗೆ ಹೋಗಿ ತಾವೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಅವರ ಮಗ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.
ಡೆಮಾಕ್ರಟಿಕ್ ಪಕ್ಷದವರಾದ ಜಸ್ಟಿನ್ ಗರ್ವನರ್ ಆಗಿದ್ದಾಗ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿದ್ದವು. ಆ ಲೈಂಗಿಕ ಸಂಬಂಧಗಳು ಪರಸ್ಪರ ಒಪ್ಪಿಗೆಯಿಂದ ನಡೆದಿದ್ದವು ಎಂದು ಜಸ್ಟಿನ್ ವಾದಿಸಿದ್ದರಲ್ಲದೆ ರಾಜೀನಾಮೆ ನೀಡಲು ನಿರಾಕರಿಸಿದ್ದರು.


