ಮುಂಬೈ: ಎಂಟು ದಶಕಗಳ ಕಾಲ ತನ್ನ ಸುಮಧುರ ಗಾಯನದಿಂದ ಪ್ರೇಕ್ಷಕರನ್ನು ರಂಜಿಸಿ, ಪ್ರತಿಯೊಬ್ಬರ ಮನದಲ್ಲೂ ವಿಶೇಷ ಸ್ಥಾನ ಪಡೆದಿದ್ದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಕಣ್ಣೀರಿನ ವಿದಾಯ ಹೇಳಲು ಜನಸಾಗರವೇ ನೆರೆದಿತ್ತು.
ಸಿನಿಮಾ ತಾರೆಯರು, ಗಣ್ಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಆಶಾ ತಾಯಿಗೆ ಅಂತಿಮ ನಮನ ಸಲ್ಲಿಸಿದರು.
ಸೋಮವಾರ ಸಂಜೆ ದಾದರ್‌ನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಮಹಾರಾಷ್ಟ್ರ ಸರ್ಕಾರದ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಕುಟುಂಬದವರ ಆಶಯದಂತೆ ಭಗವದ್ಗೀತೆಯ 9ನೇ ಅಧ್ಯಾಯವನ್ನು ಪಠಿಸಲಾಯಿತು.
ಬೆಳಿಗ್ಗೆ, ಭೋಸ್ಲೆ ಅವರ ಪಾರ್ಥಿವ ಶರೀರವನ್ನು ಲೋವರ್ ಪರೇಲ್‌ನ ಸೇನಾಪತಿ ಬಾಪಟ್ ಮಾರ್ಗದಲ್ಲಿರುವ ಕಾಸಾ ಗ್ರಾಂಡ್ ಕಾಂಪ್ಲೆಕ್ಸ್‌ನ ಅವರ ನಿವಾಸದಲ್ಲಿ ಇರಿಸಲಾಗಿತ್ತು. ಅಲ್ಲಿ ವಿವಿಧ ಕ್ಷೇತ್ರದ ಗಣ್ಯರು, ಕುಟುಂಬಸ್ಥರು ಮತ್ತು ಸ್ನೇಹಿತರು ಅಂತಿಮ ನಮನ ಸಲ್ಲಿಸಿದರು.
ತಮ್ಮ ನೆಚ್ಚಿನ ಗಾಯಕಿಯ ಅಂತಿಮ ದರ್ಶನ ಪಡೆಯಲು ಜನರು ಬೀದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಚಾವಣಿ ಹಾಗೂ ಕಿಟಕಿಗಳಿಂದ ಇಣುಕಿ ನೋಡುತ್ತಿದ್ದರು. ಲೋವರ್ ಪರೇಲ್‌ನಿಂದ ಶಿವಾಜಿ ಪಾರ್ಕ್‌ನವರೆಗೆ ನಿಧಾನವಾಗಿ ಸಾಗುತ್ತಿದ್ದ ಅಂತಿಮ ಯಾತ್ರೆಯೊಂದಿಗೆ ನೂರಾರು ಜನರು ಹೆಜ್ಜೆ ಹಾಕಿದರು.
ಹೂವುಗಳಿಂದ ಅಲಂಕರಿಸಿದ್ದ ಶವಪೆಟ್ಟಿಗೆಯ ಮೇಲೆ ಬೋಸ್ಲೆ ಅವರ ಬೃಹತ್ ಭಾವಚಿತ್ರವನ್ನು ಇರಿಸಲಾಗಿತ್ತು. ಕೆಂಪು ಸೀರೆಯಲ್ಲಿ ಕಂಗೊಳಿಸುತ್ತಿದ್ದ ಅವರ ಚಿತ್ರದಲ್ಲಿ ವಿಶಿಷ್ಟವಾದ ಬಿಂದಿ ಮತ್ತು ಮೂಗುತಿ ಎದ್ದು ಕಾಣುತ್ತಿತ್ತು. ಎಂಟು ದಶಕಗಳ ಕಾಲ ನಮ್ಮ ಹೃದಯಗಳನ್ನು ಆಳಿದ ಆ ಸಂಗೀತ ದಂತಕಥೆಯ ಅಂತಿಮ ದರ್ಶನಕ್ಕಾಗಿ ನೆರೆದಿದ್ದ ಜನಸಮೂಹದಿಂದ 'ಆಶಾ ತಾಯಿ ಅಮರರಾಗಿರಲಿ' ಎಂಬ ಘೋಷಣೆಗಳು ಮೊಳಗಿದವು.
ಭೋಸ್ಲೆ ಅವರ ಪ್ರಸಿದ್ಧ ಹಾಡುಗಳಾದ 'ಆವೋ ಹುಜೂರ್ ತುಮ್ಕೋ', 'ಆಯೇ ಮೆಹೆರ್ಬನ್', 'ಜುಮ್ಕಾ ಗಿರಾ ರೇ', 'ದಿಲ್ ಚೀಜ್ ಕ್ಯಾ ಹೈ', 'ಓ ಸಾಥಿ ರೇ' ಮತ್ತು 'ಯೈ ರೇ ಯೈ ರೇ' ಅನ್ನು ಹಾಡಲಾಯಿತು.
ಭೋಸ್ಲೆ ಅವರ ಮಗ ಆನಂದ್, ಮೊಮ್ಮಗಳು ಝಾನೈ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಗಾಯಕಿಯೂ ಆಗಿರುವ ಸಹೋದರಿ ಉಷಾ ಮಂಗೇಶ್ಕರ್ ಮತ್ತು ಸಹೋದರ ಹೃದಯನಾಥ್ ಮಂಗೇಶ್ಕರ್ ಕೂಡ ಅಲ್ಲಿದ್ದರು.
ಹಿರಿಯ ನಟಿಯರಾದ ಆಶಾ ಪರೇಖ್, ಹೆಲೆನ್, ಟಬು, ನಟ ರಣವೀರ್ ಸಿಂಗ್, ಸಂಗೀತ ಸಂಯೋಜಕ ಎ.ಆರ್. ರೆಹಮಾನ್, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ರಾಜಕೀಯ ಮುಖಂಡರಾದ ಉದ್ಧವ್ ಠಾಕ್ರೆ, ಪ್ರಫುಲ್ ಪಟೇಲ್ ಮತ್ತು ಸುಪ್ರಿಯಾ ಸುಳೆ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.
ಲತಾ ಮಂಗೇಶ್ಕರ್ ಅವರ ಸಹೋದರಿಯರಲ್ಲಿ ಒಬ್ಬರಾದ ಆಶಾ ಭೋಸ್ಲೆ, ಬಹು ಅಂಗಾಂಗ ವೈಫಲ್ಯದಿಂದಾಗಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯೂ ಶಿವಾಜಿ ಪಾರ್ಕ್‌ನಲ್ಲಿ ನಡೆದಿತ್ತು. ಅವರು 2022ರ ಫೆಬ್ರುವರಿಯಲ್ಲಿ 92ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಮುಂಬೈನ ಲೋವರ್ ಪರೇಲ್‌ನ ಸೇನಾಪತಿ ಬಾಪಟ್ ಮಾರ್ಗದಲ್ಲಿರುವ ಕಾಸಾ ಗ್ರಾಂಡೆ ಕಾಂಪ್ಲೆಕ್ಸ್‌ನಿಂದ ಶಿವಾಜಿ ಪಾರ್ಕ್‌ವರೆಗೆ ಆಶಾ ಭೋಸ್ಲೆ ಅವರ ಅಂತಿಮಯಾತ್ರೆ ನಡೆಯಿತು -ಪಿಟಿಐ ಚಿತ್ರ
ಮಿರ್ಜಾಪುರದಲ್ಲಿ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಭಾವಚಿತ್ರಕ್ಕೆ ವಿದ್ಯಾರ್ಥಿನಿಯರು ಪುಷ್ಪನಮನ ಸಲ್ಲಿಸಿದರು -ಪಿಟಿಐ ಚಿತ್ರ

