ಅಮರಾವತಿ: ಆಂಧ್ರಪ್ರದೇಶದ ಹಲವೆಡೆ ತೀವ್ರ ತಾಪಮಾನ ದಾಖಲಾಗಿದೆ.
ಕರಾವಳಿಯ ಉತ್ತರ ಜಿಲ್ಲೆಗಳು ಹಾಗೂ ರಾಯಲಸೀಮಾ ಪ್ರದೇಶದಲ್ಲಿ ತೀವ್ರ ತಾಪಮಾನವಿದೆ. 51 ಮಂಡಲಗಳಲ್ಲಿ ಉಷ್ಣಗಾಳಿಯ ತೀವ್ರತೆ ಹೆಚ್ಚಿದ್ದರೆ, 49 ಮಂಡಲಗಳಲ್ಲಿ ತೀವ್ರತಾಪಮಾನ ದಾಖಲಾಗಿದೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಪಿಎಸ್‌ಡಿಎಂಎ) ಹೇಳಿದೆ.
'ರಾಜ್ಯದ ವಿವಿಧೆಡೆ ಸೋಮವಾರ ತೀವ್ರ ತಾಪಮಾನ ದಾಖಲಾಗಿದೆ. ಮಂಗಳವಾರವೂ 53 ಮಂಡಲಗಳಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿರಲಿದ್ದು, 57 ಮಂಡಲಗಳಲ್ಲಿ ತಾಪಮಾನ ಹೆಚ್ಚಿರುವ ಸಾಧ್ಯತೆಯಿದೆ' ಎಂದು ಎಪಿಎಸ್‌ಡಿಎಂಎ ವ್ಯವಸ್ಥಾಪಕ ನಿರ್ದೇಶಕ ಪ್ರಖರ್ ಜೈನ್ ತಿಳಿಸಿದ್ದಾರೆ.
ಕಡಪ ಜಿಲ್ಲೆಯ ಪೊಟ್ಟಿಪಾಡಿನಲ್ಲಿ 43.8 ಡಿಗ್ರಿ ಸೆಲ್ಸಿಯಸ್, ತಿರುಪತಿ ಜಿಲ್ಲೆಯ ವರದಯ್ಯಪಾಳ್ಯದಲ್ಲಿ 43.1, ನಂದ್ಯಾಲದಲ್ಲಿ 42.9, ಅನಂತಪುರ ಜಿಲ್ಲೆಯ ತೇರಣಪಲ್ಲಿಯಲ್ಲಿ 42.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವು ಭಾನುವಾರ ದಾಖಲಾಗಿದೆ ಎಂದು ಹೇಳಿದ್ದಾರೆ.

