ಚೆನ್ನೈ: ತಮ್ಮ ಹೆಸರಿನಲ್ಲಿ ಬೇರೆಯವರು ಮತ ಚಲಾಯಿಸಿದ್ದಾಗಿ ನಟಿ ಅಕ್ಷಯಾ ಹರಿಹರನ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, 'ತಾವು ಮತದಾನದ ಕೇಂದ್ರಕ್ಕೆ ಬರುವ ಮೊದಲೇ ಬೇರೆಯವರು ನನ್ನ ಹೆಸರಿನಲ್ಲಿ ಮತ ಚಲಾಯಿಸಿದ್ದಾರೆ' ಎಂದು ದೂರಿದ್ದಾರೆ.
'ನಾನು ತಮಿಳುನಾಡಿನ ವೇಲಾಚೇರಿಯ ನಿವಾಸಿಯಾಗಿದ್ದು, ಚುನಾವಣೆ ದಿನ ನನಗೆ ಮತದಾನದ ಸ್ಲಿಪ್ ಸಿಕ್ಕಿರಲಿಲ್ಲ. ನಂತರ ಆನ್ಲೈನ್ನಲ್ಲಿ ವಿವರಗಳನ್ನು ಪರಿಶೀಲಿಸಿದಾಗ ನನ್ನ ಮತಗಟ್ಟೆ ಅಡ್ಯಾರ್ನಲ್ಲಿದೆ ಎಂದು ತಿಳಿದುಬಂದಿತು. ಅದರಂತೆ ನಾನು ಅಡ್ಯಾರ್ಗೆ ಹೋಗಿ ಒಂದು ಗಂಟೆ ಕಾಲ ಕಾದೆ. ನಂತರ ಅಲ್ಲಿ ನನ್ನ ಮತವನ್ನು ಈಗಾಗಲೇ ಬೇರೆಯವರು ಚಲಾಯಿಸಿದ್ದಾರೆ ಎಂದು ತಿಳಿಸಲಾಯಿತು. 24 ವರ್ಷದ ಮಹಿಳೆಯೊಬ್ಬರ ಫೋಟೊ ಇರುವ ದಾಖಲೆಯಲ್ಲಿ ಬೆರಳಚ್ಚು ಹಾಕಲಾಗಿತ್ತು. ಕಾಗದದಲ್ಲಿನ ಎಲ್ಲಾ ವಿವರಗಳು ಸರಿಯಾಗಿದ್ದು, ಕೇವಲ ಫೋಟೋ ಮಾತ್ರ ಬೇರೆಯದಾಗಿತ್ತು. ಯಾರಾದರೂ ನನ್ನ ಪರವಾಗಿ ಮತ ಚಲಾಯಿಸುವುದು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.
ಇದರ ನಡುವೆಯೂ ಮತ ಚಲಾಯಿಸಲು ತಮಗೆ ಅವಕಾಶ ನೀಡಿದ್ದಾಗಿ ಅವರು ತಿಳಿಸಿದ್ದಾರೆ.
'ಕೊನೆಗೆ ನಾನು 'ಟೆಂಡರ್ ಬ್ಯಾಲೆಟ್ ವೋಟ್' ಅಥವಾ 'ಚಾಲೆಂಜ್ ವೋಟ್' ಮಾಡಿದೆ. ಇದರ ಬಗ್ಗೆ ನನಗೆ ನನಗೆ ಸರಿಯಾದ ಮಾಹಿತಿಯಿಲ್ಲ. ಅಲ್ಲದೇ ಮತದಾನ ಮಾಡಿದ ಹಾಗೆಯೂ ನನಗೆ ಅನಿಸಲಿಲ್ಲ. ಅದು ಕೇವಲ ಒಂದು ಕಾಗದವಾಗಿತ್ತು. ಅದನ್ನು ನನ್ನ ಎದುರು ಸೀಲ್ ಕೂಡ ಮಾಡಿಲ್ಲ. ಇಂತಹ ವಿಷಯಗಳು ನಡೆಯುತ್ತಿರುವುದು ನಿಜಕ್ಕೂ ನಿರಾಶಾದಾಯಕವಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಗುರುವಾರ ಮತದಾನ ನಡೆದಿದೆ.

