ರಾಯಗಢ: ಒಡಿಶಾದ ರಾಯಗಢ ಜಿಲ್ಲೆಯಲ್ಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಘರ್ಷಣೆ ನಡೆದು ಹಲವು ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದಾಗಿನಿಂದಲೂ ಈ ಪ್ರಾಂತ್ಯದಲ್ಲಿ ಪ್ರಕ್ಷುಬ್ಧತೆ ತಲೆದೋರಿದೆ.
ಅಂದಾಜು 311 ದಶಲಕ್ಷ ಟನ್ ಬಾಕ್ಸೈಟ್ ನಿಕ್ಷೇಪ ಹೊಂದಿದೆ ಎಂದು ಹೇಳಲಾಗಿರುವ ಸಿಜಿಮಲಿಯಲ್ಲಿ ಗಣಿಗಾರಿಕೆ ನಡೆಸುವುದರಿಂದ, ದೀರ್ಘಕಾಲೀನ ಜಲ ಮೂಲಗಳು ಬತ್ತಿ ಹೋಗಲಿದ್ದು, ತಮ್ಮ ಜೀವನೋಪಾಯದ ಮೇಲೆ ಗಂಭೀರ ಪರಿಣಾಮವುಂಟಾಗಲಿದೆ ಎಂದು ಬುಡಕಟ್ಟು ಸಮುದಾಯಗಳು ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸುತ್ತಿವೆ.
ಮುಂಜಾನೆ ನಮ್ಮನ್ನು ಮನೆಗಳಿಂದ ಹೊರಬರುವಂತೆ ಸೂಚಿಸಿದ ಪೊಲೀಸರು ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಾಯಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ವಾತಿ ಕೆ. ಕುಮಾರ್, "ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಪೊಲೀಸ್ ತಂಡವೊಂದು ಜಾಮೀನು ರಹಿತ ವಾರೆಂಟ್ ಅನ್ನು ಜಾರಿ ಮಾಡಲು ಕುಟಮಲ್ ಗ್ರಾಮಕ್ಕೆ ತೆರಳಿತ್ತು. ದಿಢೀರನೆ ಗ್ರಾಮಸ್ಥರು ನಮ್ಮ ಮೇಲೆ ದಾಳಿ ನಡೆಸಿದರು. ಉಪವಿಭಾಗಾಧಿಕಾರಿ ಸೇರಿದಂತೆ ಸುಮಾರು 58 ಮಂದಿ ಪೊಲೀಸ್ ಸಿಬ್ಬಂದಿಗಳು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಆರು ಪೊಲೀಸ್ ಸಿಬ್ಬಂದಿಗಳ ಸ್ಥಿತಿ ಗಂಭೀರವಾಗಿರುವುದರಿಂದ, ಅವರನ್ನು ವಿಶಾಖಪಟ್ಟಣಂಗೆ ರವಾನಿಸಲಾಗಿದೆ. ಕಲ್ಲು ತೂರಾಟ ನಡೆಸಿದ ಗ್ರಾಮಸ್ಥರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಪೊಲೀಸರಿಂದ ಲಾಠಿ ಏಟು ತಿಂದು ಗಾಯಗೊಂಡ 8 ಗ್ರಾಮಸ್ಥರ ಸ್ಥಿತಿ ಗಂಭೀರವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

