ಕಾಸರಗೋಡು: ಮಕ್ಕಳಿಗೆ ಸನಾತನ ಸಂಸ್ಕøತಿಯ ಜೀವನಶೈಲಿ ಬೋಧಿಸುವುದರ ಜತೆಗೆ , ಉತ್ತಮ ಸಂದೇಶವುಳ್ಳ ಪೌರಾಣಿಕ ಕಥೆಗಳನ್ನು ಹೇಳುವ ಮೂಲಕ ಅವರನ್ನು ಸಂಸ್ಕಾರಯುತರನ್ನಾಗಿಸಬೇಕು ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ನಡೆದ ಪ್ರಥಮ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಮಕ್ಕಳು ಉಣ್ಣಬೇಕಿದ್ದರೆ, ಮಲಗಿ ನಿದ್ರಿಸಬೇಕಿದ್ದರೆ ಮೊಬೈಲ್ ಕೈಗೆ ಕೊಡಬೇಕಾದ ಪರಿಸ್ಥಿತಿ ಬದಲಾಗಬೇಕು. ಬದುಕಿನಲ್ಲಿ ನಮಗೆ ತಿಳಿಯದಂತೆ ನಾವು ಪಾಶ್ಚಾತ್ಯ ಸಂಸ್ಕøತಿಗೆ ಒಗ್ಗುತ್ತಿದ್ದೇವೆ. ಅದರಲ್ಲಿ ಮೊಬೈಲ್ ದಾಸ್ಯವೂ ಒಂದು. ಕೈಯಲ್ಲಿ ಮೊಬೈಲ್ ಇದ್ದಾಗ ಅರಿವಿಲ್ಲದೆಯೇ ನಾವೆಲ್ಲ ಅಸುರ ಪ್ರಕ್ರಯೆಗೆ ಜಾರಿಬಿಡುತ್ತೇವೆ. ಇದು ಭವಿಷ್ಯದಲ್ಲಿ ಅಪಾಯಕ್ಕೆ ಹಾದಿಮಾಡಿಕೊಡಲಿರುವುದಾಗಿ ತಿಳಿಸಿದರು.
ತಂತ್ರಿವರ್ಯ ಶ್ರೀಕೃಷ್ಣ ಗುರೂಜಿ ಮತ್ತು ಮಾಯಿಪ್ಪಾಡಿ ಅರಮನೆಯ ರಾಜಪ್ರತಿನಿಧಿ ರಘುರಾಮ ಶುಭನುಡಿಗಳನ್ನಾಡಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಧಾರ್ಮಿಕ ಭಾಷಣ ಮಾಡಿದರು.
ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಗೌರವಧ್ಯಕ್ಷ ಡಾ.ಅನಂತ ಕಾಮತ್, ಪುರೋಹಿತ ವೇದಮೂರ್ತಿ ನಾಗೇಂದ್ರ ಭಟ್ ಕೂಡ್ಲು, ವಾಸ್ತುತಜ್ಞ ರಮೇಶ ಕಾರಂತ ಬೆದ್ರಡ್ಕ, ಮಧೂರು ಗ್ರಾಮ ಪಂಚಾಯತಿ ಸದಸ್ಯ ಗಣೇಶ ಮೀಪುಗುರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕಾಳ್ಯಂಗಾಡು, ಬೇಳ ಬ್ರಹ್ಮ ಬೈದರ್ಕಳ ಗರಡಿ ಪ್ರಧಾನ ಅರ್ಚಕ ಸಂಕಪ್ಪ ಮಾಸ್ಟರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಸಂಘಟಕ ಜಗದೀಶ್ ಕೂಡ್ಲು ಉಪಸ್ಥಿತರಿದ್ದರು. ಈ ಸಂದರ್ಭ ಜೀರ್ಣೋದ್ಧಾರಕ್ಕೆ ನೇತೃತ್ವ ವಹಿಸಿದ್ದವರಿಗೆ ಗೌರವಾರ್ಪಣೆ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ರಂಜಿತ್ ಮನ್ನಿಪ್ಪಾಡಿ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್. ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ವೀಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗೋವಿಂದ ಕಾಳ್ಯಂಗಾಡು ವಂದಿಸಿದರು.

.jpg)

