ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎ. ಜಿ. ಪೇರರಿವಾಲನ್, ಇದೀಗ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದಾರೆ.
ತಮಿಳುನಾಡು ಮತ್ತು ಪುದುಚೇರಿ ವಕೀಲ ಸಂಘದಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಅವರು, ಕೈದಿಗಳಿಗೆ ಕಾನೂನು ನೆರವು ನೀಡುವ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ್ದಾರೆ.
54 ವರ್ಷದ ಪೇರರಿವಾಲನ್, ಸ್ಫೋಟಕ ಸಾಧನ ಪೂರೈಸಿದ ಆರೋಪದ ಮೇಲೆ 1991ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಬಂಧನಕ್ಕೊಳಗಾಗಿದ್ದರು.
ಸೋಮವಾರ ನಡೆದ ಸಮಾರಂಭದಲ್ಲಿ ಅವರನ್ನು ಅಧಿಕೃತವಾಗಿ ವಕೀಲರ ಪರಿಷತ್ತಿಗೆ ಸೇರಿಸಿಕೊಳ್ಳಲಾಯಿತು. ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 31 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ಪೇರರಿವಾಲನ್ ಅವರನ್ನು, ಸಂವಿಧಾನದ 142ನೇ ವಿಧಿ ಅಡಿಯಲ್ಲಿ ತನಗಿರುವ ಅಧಿಕಾರವನ್ನು ಚಲಾಯಿಸಿ ಸುಪ್ರೀಂ ಕೋರ್ಟ್ ಮೇ 18, 2022ರಂದು ಬಿಡುಗಡೆಗೊಳಿಸಿತ್ತು.
ನಂತರ ಬೆಂಗಳೂರಿನ ಡಾ.ಬಿ. ಆರ್. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅವರು, 2025ರಲ್ಲಿ ನಡೆದ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ (ಎಐಬಿಇ) ಉತ್ತೀರ್ಣರಾಗಿದ್ದಾರೆ.

