ತಿರುವನಂತಪುರಂ : 2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಸುರೇಶ್ ಗೋಪಿ ಅವರು ಜಯ ಗಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಕೇರಳ ಉಚ್ಚ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೋಷಿ ವಿಲ್ಲಡಂ ಅವರು ಈ ಅರ್ಜಿ ಸಲ್ಲಿಸಿದ್ದರು.
ಚುನಾವಣೆ ಸಂದರ್ಭ ಸುರೇಶ್ ಗೋಪಿ ಅವರು ಮತಗಳನ್ನು ಪಡೆಯಲು ಲಂಚ, ಎರಡು ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಹಾಗೂ ಧಾರ್ಮಿಕ ಮನವಿ ಸೇರಿದಂತೆ ಅಕ್ರಮಗಳಲ್ಲಿ ತೊಡಗಿಕೊಂಡಿದ್ದರು ಎಂದು ವಿಲ್ಲಡಮ್ ಆರೋಪಿಸಿದ್ದಾರೆ.
ಸುರೇಶ್ ಗೋಪಿ ವಿರುದ್ಧದ ಇನ್ನೊಂದು ಅರ್ಜಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.
ಆಲ್ ಇಂಡಿಯಾ ಯೂತ್ ಫೆಡರೇಶನ್ನ ನಾಯಕ ಹಾಗೂ ತ್ರಿಶೂರ್ನ ಮತದಾರ ಬಿನೋಯ್ ಎ.ಎಸ್. ಸಲ್ಲಿಸಿದ ಈ ಅರ್ಜಿಯನ್ನು ಉಚ್ಚ ನ್ಯಾಯಾಲಯ ಎಪ್ರಿಲ್ 1ರಂದು ವಿಚಾರಣೆಗೆ ಪರಿಗಣಿಸಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಯಮಗಳ ಅಡಿಯಲ್ಲಿ ಸುರೇಶ್ ಗೋಪಿ ಅವರ ಆಯ್ಕೆಯನ್ನು ಅನೂರ್ಜಿತವೆಂದು ಘೋಷಿಸುವಂತೆ ಅವರು ಕೋರಿದ್ದಾರೆ.
ವಿಲ್ಲಡಂ ಅವರಂತೆ ಬಿನೋಯ್ ಎ.ಎಸ್. ಕೂಡ ಸುರೇಶ್ ಗೋಪಿ, ಅವರ ಚುನಾವಣಾ ಏಜೆಂಟ್ ಹಾಗೂ ಸಹವರ್ತಿಗಳು ಮತದಾರರನ್ನು ಸೆಳೆಯಲು ಧಾರ್ಮಿಕ ಭಾವನೆಗಳ ಪ್ರಚೋದನೆ, ಹಣಕಾಸು ನೆರವು ಹಾಗೂ ಇತರ ಸೌಲಭ್ಯಗಳ ಆಮಿಷ ಸೇರಿದಂತೆ ಅಕ್ರಮಗಳಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ.

